ಗುಲ್ಬರ್ಗ: ರಾಜಕೀಯಕ್ಕೆ ಸೇರುವ ಇಚ್ಛೆ ನನಗಿಲ್ಲ. ರಾಜಕೀಯ ಮಾಡುವುದು ತಮಾಷೆಯ ಮಾತಲ್ಲ ಎಂದು ದುನಿಯಾ ಖ್ಯಾತಿಯ ನಟ ವಿಜಯ್ ಹೇಳಿದರು.
ಗುಲ್ಬರ್ಗದ ದಲಿತ ಸೇನೆ ಮತ್ತು ದುನಿಯಾ ವಿಜಯ್ ಅಭಿಮಾನಿ ಬಳಗ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನದ ಪರಮ ಹಕ್ಕನ್ನು ಚಲಾಯಿಸಿ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆಮಾಡಬೇಕು ಎಂದರು.
ಸಿನಿಮಾ ರಂಗದ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನ ಗಾಂಧಿನಗರ ಎನ್ನುವುದು ವಿಷವ್ಯೂಹವಿದ್ದಂತೆ. ಇದರಿಂದ ಜೀವಂತ ಹೊರಬಂದವನೇ ಗೆಲುವಿನ ಸರದಾರನಾಗಲು ಸಾಧ್ಯ ಎಂದರು. ಚಿತ್ರರಂಗದಲ್ಲಿ ಮಹಿಳೆಯರನ್ನು ದೈಹಿಕವಾಗಿ ಹಿಂಸಿಸಿದರೆ, ಪುರುಷರನ್ನು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಈ ಎಲ್ಲ ಶೋಷಣೆಗಳನ್ನು ಮೀರಿ ನಾನು ಬೆಳೆದು ಬಂದಿದ್ದರಿಂದ ಕನ್ನಡ ಚಿತ್ರರಂಗದಲ್ಲಿ ಪುಟಾಣಿ ಸೇವಕನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮನಬಿಚ್ಚಿ ಮಾತನಾಡಿದರು.
ಅವಕಾಶವಾದಿಯಾಗಿ ಬದುಕಬೇಡ ಎಂದು ಹಿಂದೆ ಒಂದು ಸಾರಿ ಮೇರುನಟ ರಜನಿಕಾಂತ್ ಅವರು ಹೇಳಿದ್ದ ಮಾತು ಕಿವಿಯಲ್ಲಿ ಇಂದಿಗೂ ಮೊಳಗುತ್ತಿದೆ. ಕುಟುಂಬದಲ್ಲಿ ಪತಿ–ಪತ್ನಿ ಅನ್ಯೋನ್ಯವಾಗಿರದಿದ್ದರೆ ವಿಚ್ಛೇದನೆ ಅನಿವಾರ್ಯವಾಗುತ್ತದೆ. ವಿಚ್ಛೇದನೆ ಪಡೆಯುವುದು ಅಪರಾಧವೆನಲ್ಲ.
ನಮ್ಮ ವಿಚ್ಛೇದ ಪ್ರಕರಣ ನ್ಯಾಯಾಲಯದಲ್ಲಿದೆ. ಕುಟುಂಬ ಜೀವನದಲ್ಲಿ ಗಂಡಸರ ಮೇಲೂ ಶೋಷಣೆಗಳು ನಡೆಯುತ್ತಿವೆ. ಅನ್ಯಾಯಕ್ಕೊಳಗಾಗಿ ನೊಂದವನೇ ನಿಜವಾದ ದಲಿತ.
ಶೋಷಿತರ ಪರ ಒಂದು ಸಿನಿಮಾ ಮಾಡುವ ಆಸೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಜಾಕ್ಸನ್ ಚಿತ್ರ ನಿರ್ದೇಶಕ ಸನತ್ಕುಮಾರ್, ದಲಿತ ಸೇನೆ ಮುಖಂಡ ಹಣಮಂತ ಯಳಸಂಗಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.