ADVERTISEMENT

ರಾಜಧಾನಿಯಲ್ಲಿ ಮತ್ತೊಂದು ಕಟ್ಟಡ ಕುಸಿತ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಬೆಂಗಳೂರು: ನಗರದ ಈಜಿಪುರದಲ್ಲಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ದಿನವೇ ಯಶವಂತಪುರದ ಬಿ.ಕೆ.ನಗರದಲ್ಲಿ ಮತ್ತೊಂದು ಒಂದು ಅಂತಸ್ತಿನ ಕಟ್ಟಡ ಕುಸಿದುಬಿದ್ದಿದೆ. ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.

ಸೊಸೈಟಿ ರಾಮಪ್ಪ ಎಂಬುವರಿಗೆ ಸೇರಿದ್ದ ಹಳೇ ಕಟ್ಟಡ ಇದಾಗಿತ್ತು. ಅವರು ಕುಟುಂಬದೊಂದಿಗೆ ತಳಮಹಡಿಯಲ್ಲಿ ವಾಸವಿದ್ದರು. ಮೊದಲ ಮಹಡಿಯ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕಟ್ಟಡದ ಗೋಡೆಗಳು ಬಿರುಕುಗೊಂಡು ನಿಧಾನವಾಗಿ ಬಾಗಲಾರಂಭಿಸಿದ್ದವು. ಅದನ್ನು ಗಮನಿಸಿದ ಸ್ಥಳೀಯರು, ಕೂಗಿ ಹೇಳುತ್ತಿದ್ದಂತೆ ಮನೆಯಲ್ಲಿದ್ದ ನಾಲ್ವರು ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅದಾದ ಬಳಿಕ ಕಟ್ಟಡದ ಪಾರ್ಶ್ವ ಭಾಗ ಕುಸಿದಿದೆ.

‘ರಾಜಕಾಲುವೆ ಪಕ್ಕವೇ ಕಟ್ಟಡವಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಯ ಆವರಣಕ್ಕೆ ನೀರು ನುಗ್ಗಿತ್ತು. ಅದರ ತೇವದಿಂದ ನೆನೆದು ಕಟ್ಟಡ ಕುಸಿದಿರಬಹುದು. ಅವಘಡದಲ್ಲಿ ಕಟ್ಟಡದಲ್ಲಿದ್ದ ಎಲ್ಲ ಪೀಠೋಪಕರಣಗಳು ಜಖಂಗೊಂಡಿವೆ. ನೆರೆಯ ನಾಲ್ಕು ಮನೆಗಳಿಗೆ ಹಾನಿಯಾಗಿವೆ. ಉಳಿದಂತೆ ಯಾರಿಗೂ ಅಪಾಯವಾಗಿಲ್ಲ’ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.