ADVERTISEMENT

ರಾಜರತ್ನಂ ಪ್ರಶಸ್ತಿಗೆ ಸುಮತೀಂದ್ರ ನಾಡಿಗ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಬೆಂಗಳೂರು:  ಹಿರಿಯ ಸಾಹಿತಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ ಅವರು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ 2010ನೇ ಸಾಲಿನ ‘ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಇಲ್ಲಿನ ‘ಕನ್ನಡ ಭವನ’ದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರು, ‘ಕನ್ನಡ ಮತ್ತು ಬಂಗಾಳಿ ಸಾಹಿತ್ಯದ ನಡುವೆ ಹಲವಾರು ವರ್ಷಗಳಿಂದ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಿರುವ ಡಾ. ನಾಡಿಗ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ’ ಎಂದರು.

ಪ್ರಶಸ್ತಿ ಮೊತ್ತ ರೂ 50 ಸಾವಿರ. ಶೀಘ್ರದಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ಪ್ರೊ.ಕಿ.ರಂ. ನಾಗರಾಜ ಅವರು 2008ನೇ ಸಾಲಿನಲ್ಲಿ ಮತ್ತು ಎಂ. ಅಂಕೇಗೌಡ ಅವರು 2009ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಚೊಚ್ಚಲ ಕೃತಿ: ಯುವ ಬರಹಗಾರರ ಮೊದಲ ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುವ ಪ್ರೋತ್ಸಾಹ ಧನಕ್ಕೆ ಈ ಬಾರಿ 23 ಕೃತಿಗಳು ಆಯ್ಕೆಯಾಗಿವೆ.

‘ಪ್ರೋತ್ಸಾಹಧನ ಕೋರಿ ಒಟ್ಟು 125 ಹಸ್ತಪ್ರತಿಗಳು ಬಂದಿದ್ದವು. ಅವುಗಳಲ್ಲಿ 23ನ್ನು ಆಯ್ಕೆ ಮಾಡಿದ್ದೇವೆ. ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪ್ರತಿಯೊಬ್ಬರಿಗೂ ತಲಾ ರೂ 10 ಸಾವಿರ ನಗದು ಹಣ ನೀಡಲಾಗುವುದು. ಲೇಖಕರು ಚೊಚ್ಚಲ ಕೃತಿ 25 ಮುದ್ರಿತ ಪ್ರತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು.

ಅವುಗಳ ಬಿಡುಗಡೆ ಸಮಾರಂಭವನ್ನು ಪ್ರಾಧಿಕಾರವೇ ಏರ್ಪಡಿಸುತ್ತದೆ’ ಎಂದರು.
ಪುಸ್ತಕ ಮೇಳ: ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇದೇ 5ರಿಂದ 8ರವರೆಗೆ ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ ನಡೆಯಲಿದೆ.

ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು 5ರಂದು ಬೆಳಿಗ್ಗೆ 11.30ಕ್ಕೆ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು  ಅವರು ತಿಳಿಸಿದರು.

ಒಂಬತ್ತು ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯದ ಎಲ್ಲ ವಿ.ವಿ.ಗಳ ಪ್ರಸಾರಾಂಗಗಳು, ಸಪ್ನ ಬುಕ್ ಹೌಸ್, ನವಕರ್ನಾಟಕ, ಅಂಕಿತ ಪುಸ್ತಕ ಸೇರಿದಂತೆ 70 ಪುಸ್ತಕ ಮಳಿಗೆಗಳು ಈ ಮೇಳದಲ್ಲಿ ಇರುತ್ತವೆ. ಪ್ರತಿ ಪುಸ್ತಕಕ್ಕೂ ಕನಿಷ್ಠ ಶೇಕಡ 25ರಷ್ಟು ರಿಯಾಯಿತಿ ಇರುತ್ತದೆ ಎಂದು ಮಾಹಿತಿ ನೀಡಿದರು.

ಕಳೆದ ಬಾರಿ ಪುಸ್ತಕ ಮೇಳದಲ್ಲಿ 70 ಲಕ್ಷ ರೂಪಾಯಿ ವಹಿವಾಟು ನಡೆದಿತ್ತು. ಈ ಬಾರಿ ರೂ 1 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.