ADVERTISEMENT

ರಾಜ್ಯದತ್ತ ಸಂತ್ರಸ್ತರ ಪಯಣ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ನವದೆಹಲಿ: ಉತ್ತರಾಖಂಡ ಪ್ರವಾಹ ಪೀಡಿತ ಪ್ರದೇಶದಿಂದ ಪಾರಾಗಿ ಬಂದ ಕರ್ನಾಟಕದ 68 ಯಾತ್ರಿಗಳ ಮೊದಲ ತಂಡ ಶನಿವಾರ ಇಲ್ಲಿಂದ ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.

ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ ತಮ್ಮ ರಾಜ್ಯದ ಸಂತ್ರಸ್ತರ ರವಾನೆಗೆ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದ್ದರೆ, ಕರ್ನಾಟಕ ಮಾತ್ರ ರೈಲ್ವೆ ಸ್ಲೀಪರ್ ಟಿಕೆಟ್‌ಗಳನ್ನು ನೀಡಿ ಕೈ ತೊಳೆದುಕೊಂಡಿದೆ.

ಕಳೆದ ಮೂರು ದಿನಗಳಿಂದ ಒಟ್ಟು 110 ಮಂದಿ ಕರ್ನಾಟಕ ಭವನ ಮತ್ತು ರಾಘವೇಂದ್ರ ಸ್ವಾಮಿ ಮಠದಲ್ಲಿ ಆಶ್ರಯ ಪಡೆದಿದ್ದಾರೆ. ಶನಿವಾರ ಬೆಳಿಗ್ಗೆ ಗೋವಾ ಎಕ್ಸ್‌ಪ್ರೆಸ್‌ನಲ್ಲಿ 18 ಮಂದಿ ತೆರಳಿದರು. ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಊಟ- ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ತಮ್ಮ ನೇತೃತ್ವದ ತಂಡ 75 ಮಂದಿ ಕರ್ನಾಟಕದ ಯಾತ್ರಿಕರನ್ನು ರಕ್ಷಿಸಿದೆ. ಇದರಲ್ಲಿ 68 ಮಂದಿಯನ್ನು ದೆಹಲಿಗೆ ಕಳುಹಿಸಲಾಗಿದೆ. ಇನ್ನು 8 ಮಂದಿ ಡೆಹ್ರಾಡೂನ್‌ನಲ್ಲಿರುವ ಸಂತ್ರಸ್ತರ ಕೇಂದ್ರದಲ್ಲಿ ಉಳಿದುಕೊಂಡಿದ್ದು, ಅವರನ್ನು ಭಾನುವಾರ ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಾರ್ತಾ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿ ಶನಿವಾರ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಲಾಡ್, ಇನ್ನೆರಡು ದಿನಗಳಲ್ಲಿ ಮಳೆಬರುವ ಸಂಭವವಿರುವುದರಿಂದ ಭಾನುವಾರ ಸಂಜೆ ಒಳಗೆ ಎಲ್ಲ ಸಂತ್ರಸ್ತರನ್ನು ರಕ್ಷಿಸುವ ಅಗತ್ಯವಿದೆ.

ಅದರಲ್ಲೂ ಬದರಿನಾಥದಲ್ಲಿ ಕರ್ನಾಟಕದ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯಾತ್ರಿಕರ ರಕ್ಷಣೆಗೆ ಹೆಲಿಕ್ಯಾಪ್ಟರ್‌ಗಳ ಅಗತ್ಯವಿದೆ. ತಕ್ಷಣ ಕೇಂದ್ರ ಸರ್ಕಾರ ಹೆಲಿಕಾಪ್ಟರ್‌ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.