ADVERTISEMENT

ರಾಜ್ಯದಲ್ಲಿ ಅರಾಜಕತೆ ನೆಲೆಸಿದೆ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌
ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌   

ಮೈಸೂರು: ರಾಜ್ಯದಲ್ಲಿ ಅರಾಜಕತೆ ನೆಲೆಸಿದ್ದು, ಅಧಿಕಾರಿಗಳು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯಪಾಲರು, ಚುನಾವಣಾ ಆಯೋಗ ಕೂಡಲೇ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಪರಾಮರ್ಶಿಸಬೇಕು ಎಂದು ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌ ಆಗ್ರಹಿಸಿದರು.

‘ಐಪಿಎಸ್‌ ಅಧಿಕಾರಿಗಳ ಸಂಘದವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ತಮಗಾಗುತ್ತಿರುವ ವೇದನೆಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದೊಂದು ಗಂಭೀರ ವಿಚಾರ. ಅಧಿಕಾರಿಗಳನ್ನು ಪದೇಪದೇ ವರ್ಗಾವಣೆ ಮಾಡಲಾಗುತ್ತಿದೆ. ಇದೇ ವಾತಾವರಣ ಮುಂದುವರಿದರೆ ರಾಜ್ಯದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಧರ್ಮ, ಜಾತಿ ಒಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಪೊಲೀಸ್‌ ಇಲಾಖೆಯನ್ನೇ ಒಡೆಯಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಇಷ್ಟೆಲ್ಲಾ ಆಗಿದ್ದರೂ ತಮಗೆ ಮಾಹಿತಿಯೇ ಇಲ್ಲ ಎಂದು ಸಿದ್ದರಾಮಯ್ಯ ನುಣುಚಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಕ್ರಿಮಿನಲ್‌ಗಳು, ಗೂಂಡಾಗಳನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಹೇಗಾದರೂ ಮಾಡಿ ಮತ್ತೆ ಸರ್ಕಾರ ರಚಿಸಬೇಕೆಂಬ ಹಟಕ್ಕೆ ಬಿದ್ದಂತಿರುವ ಇವರ ನಡವಳಿಕೆ ಅನುಮಾನಕ್ಕೆಡೆ ಮಾಡಿಕೊಟ್ಟಿದೆ’ ಎಂದರು.

ಸರ್ಕಾರಿ ವೆಚ್ಚದಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ನಡೆಯುತ್ತಿದೆ. ಅಧಿಕಾರಿಗಳನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಪ್ರಚಾರ ನಡೆಸುವುದು ಎಷ್ಟು ಸರಿ? ಪೂರ್ಣಗೊಳ್ಳದ ಕಾಮಗಾರಿಗಳನ್ನು ತರಾತುರಿಯಲ್ಲಿ ಉದ್ಘಾಟಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯೇ ಇದಕ್ಕೆ ಕಾರಣ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.