ADVERTISEMENT

ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಬಿಳಗಿ ಹೊಳೆ ಮೈತುಂಬಿ ಹರಿದ ದೃಶ್ಯ
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಬಿಳಗಿ ಹೊಳೆ ಮೈತುಂಬಿ ಹರಿದ ದೃಶ್ಯ   

ಬೆಂಗಳೂರು: ರಾಜ್ಯದ ಬಹುತೇಕ ಪ್ರದೇಶದಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಬಿರುಸುಗೊಂಡಿದ್ದು, ಉಡುಪಿ ಜಿಲ್ಲೆಯ ಪಡುಬಿದ್ರಿಯ ತೆಂಕ ಎರ್ಮಾಳು ಕಂಚಿನ ತೋಟ ಎಂಬಲ್ಲಿ ಭಾರಿ ಗಾಳಿಗೆ ಮನೆಯೊಂದರ ಮೇಲೆ ಮರ ಬಿದ್ದು, ಮೂವರು ಗಾಯಗೊಂಡಿದ್ದಾರೆ.

ಚಿಕ್ಕಿ ಪೂಜಾರ್ತಿ ಎಂಬುವರ ಮನೆಯ ಚಾವಣಿಯ ಮರ ಮೇಲೆ ಬಿದ್ದಿದೆ. ಮನೆಯೊಳಗಿದ್ದ ಲತಾ, ಮಕ್ಕಳಾದ ಸಿಂಚನಾ ಹಾಗೂ ನಿಶಾನ್ ಗಾಯಗೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದೆ. ಬ್ರಹ್ಮಗಿರಿ ವ್ಯಾಪ್ತಿಯ ತಲಕಾವೇರಿಯಲ್ಲಿ ಸುರಿಯುತ್ತಿರುವ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ.

ADVERTISEMENT

ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಮಳೆ ಚುರುಕುಗೊಂಡಿದೆ. ಲಿಂಗನಮಕ್ಕಿ ಜಲಾಶಯಕ್ಕೆ 13,828 (1 ಟಿಎಂಸಿ ಅಡಿ) ಕ್ಯುಸೆಕ್, ಭದ್ರಾ ಜಲಾಶಯಕ್ಕೆ 3,321 ಕ್ಯುಸೆಕ್ ನೀರು ಹರಿದುಬರುತ್ತಿದೆ.

ಎಡೆಬಿಡದೇ ಸುರಿದ ಮಳೆಯ ಪರಿಣಾಮ ಸಾಗರದ ನೆಹರೂ ನಗರದಲ್ಲಿ ಮನೆಯೊಂದು ಕುಸಿದಿದೆ.

ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಚಿಂಚೋಳಿಯಲ್ಲಿ 43.5 ಮಿ.ಮೀ ಹಾಗೂ ಆಳಂದ ತಾಲ್ಲೂಕಿನಲ್ಲಿ 34.1 ಮಿ.ಮೀ ಮಳೆ ಸುರಿದಿದೆ.

ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಉತ್ತರ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಗಳ ಕೆಲವೆಡೆ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಧಾರವಾಡ ನಗರದಲ್ಲಿ ದಿನವಿಡೀ ಧಾರಾಕಾರ ಮಳೆಯಾಗಿದ್ದು, ಸಿದ್ದಾಪುರ ತಾಲ್ಲೂಕಿನ ಹೊಳೆ ಹಳ್ಳಗಳು ಮೈದುಂಬಿಕೊಂಡಿವೆ.

ಕಾರವಾರದ ಬಿಣಗಾ ಬಳಿಯ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಬೆಳಿಗ್ಗೆ ಅಡ್ಡಲಾಗಿ ಮರವೊಂದು ಬುಡಸಮೇತ ಬಿದ್ದಿದ್ದರಿಂದ ಸುಮಾರು ಅರ್ಧ ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.