ADVERTISEMENT

ರಾಜ್ಯದಲ್ಲಿ ಮ‌ತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ: ಕೆ.ಸಿ. ವೇಣುಗೋಪಾಲ್‌

ಕೋಲಾರದಲ್ಲಿ ಕಾಂಗ್ರೆಸ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 13:37 IST
Last Updated 14 ಅಕ್ಟೋಬರ್ 2017, 13:37 IST
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌   

ಕೋಲಾರ: ‘ರಾಜ್ಯದ ಮೂಡಣ ಬಾಗಿಲು ಎಂದೇ ಹೆಸರಾಗಿರುವ ಕೋಲಾರ ಜಿಲ್ಲೆಯಿಂದ ವಿಧಾನಸಭಾ ಚುನಾವಣೆಗೆ ಪಕ್ಷದ ಅಶ್ವಮೇಧ ಯಾಗ ಆರಂಭವಾಗಿದೆ. ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಕಾಂಗ್ರೆಸ್‌ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘2018ರ ವಿಧಾನಸಭಾ ಚುನಾವಣೆಯು ಪಕ್ಷದ ಪಾಲಿಗೆ ಬಹಳ ಮುಖ್ಯ. ಚಿನ್ನಕ್ಕೆ ಹೆಸರಾಗಿರುವ ಕೋಲಾರ ಜಿಲ್ಲೆಗೂ ಪಕ್ಷಕ್ಕೂ ಬಿಡಿಸಲಾಗದ ನಂಟಿದೆ. 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಜಿಲ್ಲೆಯ ಕುರುಡುಮಲೆಯಿಂದಲೇ ಪಕ್ಷದ ಚುನಾವಣಾ ಪ್ರಚಾರ ಆರಂಭವಾಗಿತ್ತು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನಾಲ್ಕೂವರೆ ವರ್ಷದಲ್ಲಿ ಉತ್ತಮ ಆಡಳಿತ ನೀಡಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮೂರೂವರೆ ವರ್ಷದಲ್ಲಿ ಏನು ಸಾಧನೆ ಮಾಡಿದೆ ಎಂಬ ಬಗ್ಗೆ ಆ ಪಕ್ಷದ ಮುಖಂಡರು ಬಹಿರಂಗ ಚರ್ಚೆಗೆ ಬರಲಿ. ಕೇಂದ್ರದ ಕೆಟ್ಟ ಆರ್ಥಿಕ ನೀತಿಯ ಫಲವಾಗಿ ತೈಲೋತ್ಪನ್ನಗಳು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ’ ಎಂದು ಟೀಕಿಸಿದರು.

ADVERTISEMENT

‘ಮಾಜಿ ಹಣಕಾಸು ಸಚಿವ ಯಶವಂತ್‌ ಸಿನ್ಹಾ ಹಾಗೂ ಬಿಜೆಪಿಯ ಸಂಸದರೇ ಕೇಂದ್ರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ. ಬಿಜೆಪಿಯು ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಇಬ್ಭಾಗ ಮಾಡಿ ಅಧಿಕಾರ ಹಿಡಿಯಲು ಹೊರಟಿದೆ. ಆದರೆ, ಕಾಂಗ್ರೆಸ್‌ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.