ADVERTISEMENT

ರಾಜ್ಯದಲ್ಲಿ ಯುವಕರ ಸಂಖ್ಯೆಯೇ ಹೆಚ್ಚು!

ವಿಜೇಶ್ ಕಾಮತ್
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST
ರಾಜ್ಯದಲ್ಲಿ ಯುವಕರ ಸಂಖ್ಯೆಯೇ ಹೆಚ್ಚು!
ರಾಜ್ಯದಲ್ಲಿ ಯುವಕರ ಸಂಖ್ಯೆಯೇ ಹೆಚ್ಚು!   

ಬೆಂಗಳೂರು: ರಾಜ್ಯದ ಜನಸಂಖ್ಯೆಯಲ್ಲಿ ಯುವಕರ ಪಾಲು ಹೆಚ್ಚು.
ಜನಗಣತಿ ಆಯುಕ್ತ ಮತ್ತು ರಿಜಿಸ್ಟರ್‌ ಜನರಲ್‌ ಅವರು ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಪ್ರತಿ ವರ್ಷದ ಮಾಹಿತಿ ದತ್ತಾಂಶ’ ಪ್ರಕಾರ  ರಾಜ್ಯದಲ್ಲಿ 20ರಿಂದ 29 ವಯಸ್ಸಿನ ಯುವಕರ ಸಂಖ್ಯೆ 1.18 ಕೋಟಿ.

ಇದು ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 19.35 ಭಾಗವಾಗಿದೆ.

ದುಡಿಯುವ ವರ್ಗ ಹೆಚ್ಚಿನ ಸಂಖ್ಯೆ ಯಲ್ಲಿರುವುದರಿಂದ ಉತ್ಪಾದನೆ ವಲಯಕ್ಕೆ ಅನುಕೂಲವಾಗಲಿದೆ ಎಂದು ಜನಸಂಖ್ಯಾಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.1 ಕೋಟಿ. ಅಂಕಿ –ಸಂಖ್ಯೆಗಳ ಲೆಕ್ಕಾಚಾರದ ಪ್ರಕಾರ 3.34 ಕೋಟಿ ಜನರು (ಶೇ 54.64) 20ರಿಂದ 60 ವರ್ಷದ ಒಳಗಿನವರು ದುಡಿಯುವ ವರ್ಗಕ್ಕೆ ಸೇರಿದ್ದಾರೆ. 60 ವರ್ಷಕ್ಕಿಂತ ಹೆಚ್ಚಿನವರ ಜನಸಂಖ್ಯೆ ಕೇವಲ ಶೇಕಡಾ 9.42 ಮತ್ತು 0–20 ವರ್ಷಗಳ ನಡುವೆ ಇರುವವರ ಜನ ಸಂಖ್ಯೆ ಶೇಕಡಾ 35.75.

‘ಪ್ರಸ್ತುತ ಜನಸಂಖ್ಯೆ ಶೇಕಡಾವಾರು ಪ್ರಮಾಣವನ್ನು ಹೋಲಿಸಿದಾಗ ಯುವಕರ ಸಂಖ್ಯೆ ಹೆಚ್ಚಿರುವುದು ಉತ್ತಮ. ಯುವ ಪಡೆಯಿಂದ  ಅಭಿವೃದ್ಧಿ ವೇಗ ಹೆಚ್ಚಿಸಲು ಸಾಧ್ಯ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದರೆ ಉತ್ಪಾದನೆ ಕ್ಷೇತ್ರಕ್ಕೆ ಅನುಕೂಲವಾಗ ಲಿದೆ’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಜನಸಂಖ್ಯೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಕೆ.ಎಸ್‌. ಜೇಮ್ಸ್‌ ಹೇಳುತ್ತಾರೆ.

ಜನಗಣತಿ ಸಂದರ್ಭದಲ್ಲಿ ಬಹು ಪಾಲು ಮಂದಿ ತಮ್ಮ ವಯಸ್ಸನ್ನು ಕೊನೆ ಸಂಖ್ಯೆ ‘5’ ಅಥವಾ ‘10’ಕ್ಕೆ ಹೊಂದಾಣಿಕೆಯಾಗುವಂತೆ ತಿಳಿಸಿರುವ ವಿಷಯವೂ ಬೆಳಕಿಗೆ ಬಂದಿದೆ. ಉದಾ ಹರಣೆಗೆ 4.8 ಲಕ್ಷ ಮಂದಿ ತಮ್ಮ ವಯಸ್ಸನ್ನು 49 ವರ್ಷ ಎಂದು ತಿಳಿಸಿ ದ್ದಾರೆ. ಆದರೆ, 12.9 ಲಕ್ಷ ಮಂದಿ ತಮ್ಮ ವಯಸ್ಸನ್ನು 30 ಎಂದು ಮಾಹಿತಿ ನೀಡಿದ್ದಾರೆ. ವಯಸ್ಸಿನ ಮಾಹಿತಿಯನ್ನು ಅವಲೋಕನ ಮಾಡಿದಾಗಲೂ ಪ್ರತಿ ಐದು ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಏರಿಕೆಯಾಗಿದೆ.

22,757 ಮಂದಿ ತಮ್ಮ ವಯಸ್ಸು 100 ಎಂದು ತಿಳಿಸಿದ್ದಾರೆ.  17.19 ಲಕ್ಷ ಮಂದಿ ತಮ್ಮ ವಯಸ್ಸು 30 ಎಂದು ತಿಳಿಸಿದ್ದಾರೆ. 16.38 ಲಕ್ಷ ಮಂದಿ ತಮ್ಮ ವಯಸ್ಸು 40 ಎಂದು  ಜನಗಣತಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.