ADVERTISEMENT

ರಾಜ್ಯದಲ್ಲಿ ಶೇ 26.3ರಷ್ಟು ಧೂಮಪಾನಿಗಳು!

ಮಾನಸ ಬಿ.ಆರ್‌
Published 30 ಮೇ 2018, 19:55 IST
Last Updated 30 ಮೇ 2018, 19:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 26.3ರಷ್ಟು ಧೂಮಪಾನಿಗಳಿದ್ದಾರೆ. ಇವರಲ್ಲಿ ಪುರುಷರು ಶೇ 16.8ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಶೇ 0.7ರಷ್ಟಿದೆ. ವಯಸ್ಕರು ಶೇ 8.8ರಷ್ಟಿದ್ದಾರೆ.

ರಾಜ್ಯದಲ್ಲಿ ತಂಬಾಕು ಸೇವಿಸುವವರ ಕುರಿತು ಗ್ಯಾಟ್ಸ್‌ (ದಿ ಗ್ಲೋಬಲ್‌ ಅಡಲ್ಟ್ ಟೊಬ್ಯಾಕೊ) ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಈ ಮಾಹಿತಿ ಹೊರಬಿದ್ದಿದೆ.

‘ಟಾಟಾ ಇನ್‌ಸ್ಟಿಟ್ಯೂಟ್ ಆಫ್‌ ಸೋಷಿಯಲ್‌ ಸೈನ್ಸ್‌’, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ಸರ್ಕಾರದ ಸಹಯೋಗದೊಂದಿಗೆ ಗ್ಯಾಟ್ಸ್‌ ಈ ಸಮೀಕ್ಷೆ ನಡೆಸಿದೆ. 1,311 ಪುರುಷರು ಹಾಗೂ 1,403 ಮಹಿಳೆಯರನ್ನು ಸಂದರ್ಶಿಸಲಾಗಿದೆ. 15 ವರ್ಷ ದಾಟಿದವರನ್ನು ಮಾತ್ರ ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ADVERTISEMENT

ಸಮಾಧಾನಕರ ಸಂಗತಿ ಎಂದರೆ, 2009–10ರ ಸಾಲಿಗೆ ಹೋಲಿಸಿದರೆ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ 3.1ರಷ್ಟು ಇಳಿಮುಖವಾಗಿದೆ. ಇಷ್ಟೇ ಪ್ರಮಾಣದಲ್ಲಿ ತಂಬಾಕು ಜಗಿಯುವವರ ಸಂಖ್ಯೆ ಕೂಡ ಕಡಿಮೆಯಾಗಿದೆ.

ಎಲ್ಲ ವಿಧದ ತಂಬಾಕನ್ನು ಸೇವನೆ ಮಾಡುವವರ ಪ್ರಮಾಣದಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. 2009–10ರ ಸಾಲಿನಲ್ಲಿ ಇದು 28.2ರಷ್ಟಿದ್ದರೆ, 2017ರ ಹೊತ್ತಿಗೆ 22.8ರಷ್ಟಾಗಿದೆ.

ಯುವಕರ ಸಂಖ್ಯೆ ಕಡಿಮೆ: ರಾಜ್ಯದ ಯುವಕರಲ್ಲಿ (15ರಿಂದ17ರ ವಯೋಮಾನದವರು) ತಂಬಾಕು ಬಳಕೆ ಮಾಡುವವರ ಸಂಖ್ಯೆ ಇಳಿಕೆಯಾಗಿದೆ. ಶೇ 6.8ರಷ್ಟಿದ್ದ ಪ್ರಮಾಣ ಈಗ ಶೇ 3.7ಕ್ಕೆ ಕುಸಿದಿದೆ.

ತಂಬಾಕು ಬಳಕೆ ಮಾಡಲು ಆರಂಭಿಸುವ ವಯೋಮಾನದಲ್ಲಿಯೂ ಬದಲಾವಣೆ ಕಂಡುಬಂದಿದೆ. ಈ ಮೊದಲು 17.7 ವರ್ಷಕ್ಕೆ ತಂಬಾಕು ಸೇವನೆ ಆರಂಭಿಸುವವರ ಸಂಖ್ಯೆ ಹೆಚ್ಚಿತ್ತು. ಈಗ ಇದು 19.8 ವರ್ಷಕ್ಕೆ ಏರಿಕೆಯಾಗಿದೆ.

ಶೇ 51.7ರಷ್ಟು ಮಂದಿಗೆ ಕೂಡಲೇ ಧೂಮಪಾನ ನಿಲ್ಲಿಸಬೇಕೆಂದು ವೈದ್ಯರು ಸೂಚನೆ ನೀಡಿದ್ದರೆ, ಶೇ 63.9ರಷ್ಟು ಮಂದಿಗೆ ತಂಬಾಕು ಜಗಿಯದಂತೆ ಸಲಹೆ ಕೊಟ್ಟಿದ್ದಾರೆ ಎಂಬುದನ್ನು ಸಮೀಕ್ಷೆ ಹೇಳುತ್ತದೆ.

ಕಟ್ಟಡದೊಳಗೆ ಅಥವಾ ಕೆಲಸ ಮಾಡುವ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಂದ ಇತರರು ಸಮಸ್ಯೆ ಎದುರಿಸುತ್ತಿರುವ ಪ್ರಕರಣಗಳು ಹೆಚ್ಚಿವೆ. ಸಾರ್ವಜನಿಕ ಸ್ಥಳಗಳಲ್ಲಿ ಶೇ 23.9ರಷ್ಟು ಜನ ಬೇರೆಯವರು ಮಾಡುವ ಧೂಮಪಾನದಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

ಸಿಗರೇಟು, ಬೀಡಿ ಪೊಟ್ಟಣಗಳ ಮೇಲೆ ಮುದ್ರಿತವಾಗಿರುವ ಅಪಾಯದ ಎಚ್ಚರಿಕೆಯನ್ನು ಗಮನಿಸಿ ಶೇ 73.8ರಷ್ಟು ಸಿಗರೇಟ್‌ ಬಳಕೆದಾರರು ಹಾಗೂ ಶೇ 63.7ರಷ್ಟು ಬೀಡಿ ಸೇದುವವರು ಧೂಮಪಾನ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದೇ ರೀತಿ ಶೇ 47.4ರಷ್ಟು ವ್ಯಸನಿಗಳು ಗುಟ್ಕಾ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

‘ಜನಜಾಗೃತಿ ಹೆಚ್ಚಬೇಕು’

ಧೂಮಪಾನ ಮಾಡುತ್ತಿರುವ ಯುವಕರ ಸಂಖ್ಯೆ ಕಡಿಮೆಯಾಗಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಮನೆ, ಕಚೇರಿ, ಹೋಟೆಲ್‌ಗಳಲ್ಲಿ ಧೂಮಪಾನ ಮಾಡುವವರು ಹೆಚ್ಚಾಗಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿಯ ಸದಸ್ಯ ಡಾ. ವಿಶಾಲ್‌ ರಾವ್‌ ಹೇಳಿದರು.

‘ಕಾಯ್ದೆಯ ಉಲ್ಲಂಘನೆ ಆಗುತ್ತಿರುವುದು ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಧೂಮಪಾನ ಮಾಡುವ ಜಾಗದಲ್ಲಿ ಊಟ, ನೀರು ಸಿಗುವಂತಿದ್ದರೆ, ಅದರಿಂದಾಗುವ ದುಪ್ಪರಿಣಾಮ ಹೆಚ್ಚು. ಈ ಬಗ್ಗೆ ಬಿಬಿಎಂಪಿಗೂ ದೂರು ನೀಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.