ADVERTISEMENT

ರಾಜ್ಯದ ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮದು: ಪರಮೇಶ್ವರ್‌

‘ಸಾಲ ಮನ್ನಾ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಲಿ’

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ಮರುಚಾಲನೆ ಕಾರ್ಯಕ್ರಮ ನಡೆಯುವ ಅಂಬೇಡ್ಕರ್ ಭವನದ ಮುಂಭಾಗ ಕಾರ್ಮಿಕನೊಬ್ಬ ಪ್ರವೇಶ ಕಮಾನಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ದೃಶ್ಯ ಭಾನುವಾರ ಕಂಡಿತು.	– ಪ್ರಜಾವಾಣಿ ಚಿತ್ರ
‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ಮರುಚಾಲನೆ ಕಾರ್ಯಕ್ರಮ ನಡೆಯುವ ಅಂಬೇಡ್ಕರ್ ಭವನದ ಮುಂಭಾಗ ಕಾರ್ಮಿಕನೊಬ್ಬ ಪ್ರವೇಶ ಕಮಾನಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ದೃಶ್ಯ ಭಾನುವಾರ ಕಂಡಿತು. – ಪ್ರಜಾವಾಣಿ ಚಿತ್ರ   

ಬೆಂಗಳೂರು:  ‘ರೈತರ ಸಾಲ ಮನ್ನಾ ಮಾಡುವುದಿಲ್ಲ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಲಿ. ರಾಜ್ಯದ ರೈತರನ್ನು ಕಾಪಾಡುವುದು ಹೇಗೆ ಎಂಬುದು ನಮಗೆ ಗೊತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಭಾನುವಾರ ಇಲ್ಲಿ ಹೇಳಿದರು.

‘ಇಡೀ ದೇಶದಲ್ಲಿ ಗಣ್ಯ ವ್ಯಕ್ತಿಗಳ ಕಾರಿನ ಕೆಂಪು ದೀಪ ತೆಗೆದು ಏಕಾಏಕಿ ಆದೇಶ ಮಾಡುತ್ತಾರೆ. ರೈತರ ಕಷ್ಟ ನಿವಾರಿಸುವಂತಹ  ಆದೇಶ ಮಾಡಲು ಪ್ರಧಾನಿಗೆ ಸಾಧ್ಯವಿಲ್ಲವೇ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದೇಶದಾದ್ಯಂತ ವರದಿಯಾಗುತ್ತಿದೆ. ರೈತರ ಸಾಲ ಮನ್ನಾ ಮಾಡುವ ಸಂಬಂಧ ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿಯನ್ನು ರೂಪಿಸಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಕೇಂದ್ರ ಸರ್ಕಾರ  ರೈತರ ಸಾಲ ಮನ್ನಾ ಮಾಡುವುದಿಲ್ಲ. ರಾಜ್ಯ ಸರ್ಕಾರಗಳೇ ಮಾಡಬಹುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿರಬಹುದು. ಇದನ್ನೇ ಪ್ರಧಾನಿ ಮೋದಿ ರಾಷ್ಟ್ರದ ಜನರಿಗೆ ತಿಳಿಸಲಿ’ ಎಂದರು.

ಸರ್ವ ಸದಸ್ಯರ ಸಭೆ: ವಿಧಾನಸಭಾ ಚುನಾವಣೆಗೆ ಸಿದ್ಧತೆ ಮತ್ತು ದೇಶದಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸೋಮವಾರ ರಾಹುಲ್‌ಗಾಂಧಿ ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಲಾಗುವುದು  ಎಂದು  ಪರಮೇಶ್ವರ್ ಹೇಳಿದರು.

ಈ ಸಭೆಯಲ್ಲಿ ಸುಮಾರು 1,500 ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ . 2018 ರ ಚುನಾವಣೆ  ಕಾರ್ಯತಂತ್ರದ ಕುರಿತು  ಚರ್ಚೆ ನಡೆಸಲಾಗುತ್ತದೆ. ರಾಜ್ಯದಲ್ಲಿ ಪಕ್ಷದ  ಸಂಘಟನೆ ಬಲಪಡಿಸುವ ಬಗ್ಗೆಯೂ  ನಿರ್ದೇಶನಗಳನ್ನು ನೀಡಲಿದ್ದಾರೆ ಎಂದರು.

****
ಮಹಾತ್ಮ ಗಾಂಧಿ ಅವರನ್ನು ‘ಚತುರ ಬನಿಯಾ’ ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ದೇಶದ ಜನರಿಗೆ ಅಪಮಾನ ಮಾಡಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು

ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.