ADVERTISEMENT

ರಾಜ್ಯಪಾಲರಿಗೆ ಲಂಚ: ಉಪನ್ಯಾಸಕ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ಹಾಸನ: ರಾಜ್ಯಪಾಲರಿಗೆ ಲಂಚರೂಪವಾಗಿ ಚೆಕ್ ಕಳುಹಿಸಿದ ಆರೋಪದಡಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರೊಬ್ಬರು ಅಮಾನತುಗೊಂಡಿದ್ದಾರೆ.  ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕ ಬಿ.ವಿ.ಜಯಂತ್ ಅಮಾನತುಗೊಂಡವರು. ಮೂಲತಃ ಚಿಕ್ಕಮಗಳೂರಿನವರಾದ ಇವರನ್ನು ಬೀದರ್‌ಗೆ ವರ್ಗಾವಣೆ ಮಾಡಲಾಗಿತ್ತು.

ಬೀದರ್‌ನಿಂದ ಕೆಲದಿನಗಳ ಹಿಂದಷ್ಟೇ ಹಾಸನಕ್ಕೆ ವರ್ಗಾವಣೆಗೊಂಡಿದ್ದರು.  ಪಾಲಿಟೆಕ್ನಿಕ್ ಶಿಕ್ಷಣ ಇಲಾಖೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಇವರು ರಾಜ್ಯಪಾಲರಿಗೆ ಈ ಹಿಂದೆ 13 ಪತ್ರಗಳನ್ನು ಬರೆದಿದ್ದರು ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಬರೆದ ಪತ್ರದೊಂದಿಗೆ ಒಂದು ಲಕ್ಷ ರೂಪಾಯಿಯ ಚೆಕ್ ಲಗತ್ತಿಸಿ ಕಳುಹಿಸಿದ್ದರು.

`ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಇಲಾಖೆಯಲ್ಲಿ ಅನೇಕರು ವರ್ಗಾವಣೆ ದಂಧೆ ನಡೆಯುತ್ತಿದೆ. ಈ ಪತ್ರದೊಂದಿಗೆ ಒಂದು ಲಕ್ಷ ರೂಪಾಯಿ ಚೆಕ್ ಇಟ್ಟಿದ್ದು, ಇದನ್ನು ಇಲಾಖೆಯವರಿಗೆ ನೀಡಿ ನನ್ನನ್ನು ವರ್ಗಾಯಿಸಲು ಸೂಚಿಸಿ~ ಎಂದು ಪತ್ರದಲ್ಲಿ ರಾಜ್ಯಪಾಲರಿಗೆ ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಲಂಚ ನೀಡಲು ಮುಂದಾದ ಆರೋಪದಲ್ಲಿ ಇವರನ್ನು ಅಮಾನತುಗೊಳಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಅಮಾನತು ಆದೇಶಕ್ಕೆ ಪ್ರತಿಕ್ರಿಯಿಸಿದ ಉಪನ್ಯಾಸಕ, `ನನಗೆ ಈಗ ಬಿಡುಗಡೆ ಸಿಕ್ಕಿದೆ.

ರಾಜ್ಯಪಾಲರಿಗೆ ಲಕ್ಷ ರೂಪಾಯಿಯ ಚೆಕ್ ಕಳುಹಿಸಿದ ತಕ್ಷಣ ಸರ್ಕಾರ ಅಮಾನತು ಆದೇಶ ಹೊರಡಿಸಿದೆ. ಆದರೆ ಇಲಾಖೆಯಲ್ಲಿನ ಅಕ್ರಮಗಳ ಕುರಿತು 13 ಪತ್ರ ಬರೆದರೂ ಕ್ರಮ ಕೈಗೊಳ್ಳದಿರುವುದು ಸೋಜಿಗದ ಸಂಗತಿ~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.