ಬೆಂಗಳೂರು: ರಾಜ್ಯಸಭೆಯ ಉಪ ಸಭಾಪತಿಯಾಗಿರುವ ಕಾಂಗ್ರೆಸ್‌ನ ಕೆ.ರೆಹಮಾನ್ ಖಾನ್, ಬಿಜೆಪಿಯ ಬಸವರಾಜ ಪಾಟೀಲ ಸೇಡಂ,ಆರ್.ರಾಮಕೃಷ್ಣ ಮತ್ತು ಪಕ್ಷೇತರ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಗುರುವಾರ ಅಧಿಕೃತವಾಗಿ ಘೋಷಣೆಯಾಗಲಿದೆ.
ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಿ.ಜೆ.ಪುಟ್ಟಸ್ವಾಮಿ ಅವರ ನಾಮಪತ್ರ ಬುಧವಾರ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ನಾಲ್ವರು ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ದಾರಿ ಸುಗಮವಾಯಿತು.
ನಾಮಪತ್ರ ವಾಪಸ್ ಪಡೆಯಲು ಗುರುವಾರ ಕೊನೆಯ ದಿನವಾಗಿದ್ದು, ಮಧ್ಯಾಹ್ನ 3 ಗಂಟೆ ನಂತರ ಅವಿರೋಧ ಆಯ್ಕೆ ಬಗ್ಗೆ ಪ್ರಕಟಣೆ ಹೊರ ಬೀಳಲಿದೆ. ರೆಹಮಾನ್ ಖಾನ್ ಅವರು ನಾಲ್ಕನೇ ಬಾರಿಗೆ ರಾಜ್ಯಸಭೆ ಪ್ರವೇಶಿಸುತ್ತಿದ್ದರೆ, ಪಕ್ಷೇತರ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಎರಡನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಪುಟ್ಟಸ್ವಾಮಿ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಮಪತ್ರ ಸಲ್ಲಿಸಿರುವುದಾಗಿ ಹೇಳಿದ್ದರು. ಆದರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಗಳಿಗೆ ನೀಡಿರುವ ರಾಜೀನಾಮೆ ಪತ್ರದ ಪ್ರತಿಯನ್ನು ನೀಡಿದ್ದರೆ ಹೊರತು, ಅಂಗೀಕಾರವಾಗಿರುವ ಪತ್ರವನ್ನು ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಪುಟ್ಟಸ್ವಾಮಿ ವಿರುದ್ಧ ಚುನಾವಣಾಧಿಕಾರಿ ಓಂಪ್ರಕಾಶ್ ಅವರಿಗೆ ಮಂಗಳವಾರ ದೂರು ನೀಡಿದ್ದರು. ಈ ಬಗ್ಗೆ ಬುಧವಾರ ವಿಚಾರಣೆ ನಡೆಸಿದ ಓಂಪ್ರಕಾಶ್, ರಾಜೀನಾಮೆ ಅಂಗೀಕಾರವಾಗಿರುವ ಪತ್ರವನ್ನು ನೀಡಿಲ್ಲ. ಆದ್ದರಿಂದ ಲಾಭದಾಯಕ ಹುದ್ದೆ ಹೊಂದಿರುವ ಆಧಾರದ ಮೇಲೆ ತಮ್ಮ ರಾಜೀನಾಮೆ ಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಪ್ರಕಟಿಸಿದರು.
ಬುಧವಾರ ಬೆಳಿಗ್ಗೆ ಪುಟ್ಟಸ್ವಾಮಿ ನಾಮಪತ್ರ ವಾಪಸ್ ಪಡೆಯುವ ಪತ್ರವನ್ನು ಚುನಾವಣಾಧಿಕಾರಿ ಅವರಿಗೆ ನೀಡಿದರು. ಆದರೆ ಪೂರ್ವ ನಿಗದಿಯಂತೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಅದನ್ನು ಪರಿಗಣಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.