ADVERTISEMENT

ರಾಜ್ಯ ಸರ್ಕಾರಕ್ಕೆ ಕಿಂಚಿತ್ತೂ ಆಸಕ್ತಿ ಇಲ್ಲ: ಇ.ಶ್ರೀಧರನ್‌ ಆರೋಪ

ಬೆಂಗಳೂರು– ಮೈಸೂರು ನಡುವೆ ಅತಿ ವೇಗದ ರೈಲು ಯೋಜನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2015, 19:30 IST
Last Updated 18 ಆಗಸ್ಟ್ 2015, 19:30 IST

ಬೆಂಗಳೂರು: ‘ಮೈಸೂರು– ಬೆಂಗಳೂರು ನಡುವೆ ಅತಿ ವೇಗದ ರೈಲು ಯೋಜನೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಎರಡು ವರ್ಷಗಳು ಕಳೆದಿವೆ. ಈವರೆಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ. ಪತ್ರ ತಲುಪಿದ್ದಕ್ಕೆ ಹಿಂಬರಹವನ್ನೂ ಕಳುಹಿಸಿಲ್ಲ’ ಎಂದು ದೆಹಲಿ ಮೆಟ್ರೊ ರೈಲು ನಿಗಮದ (ಡಿಎಂಆರ್‌ಸಿ) ಪ್ರಧಾನ ಸಲಹೆಗಾರ ‘ಮೆಟ್ರೊಮ್ಯಾನ್‌’ ಇ. ಶ್ರೀಧರನ್‌ ತೀವ್ರ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರು ಹಳೆಯ ರಾಜಧಾನಿ. ಬೆಂಗಳೂರು ಈಗಿನ ರಾಜಧಾನಿ. ರಾಜ್ಯದ ಈ ಎರಡು ದೊಡ್ಡ ನಗರಗಳ ನಡುವೆ ತ್ವರಿತ ಮತ್ತು ಸುಗಮ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತೂ ಆಸಕ್ತಿ ಇಲ್ಲ’ ಎಂದು ಟೀಕಿಸಿದರು.

‘ನಾವು ನೀಡಿದ ಸಾಧ್ಯತಾ ವರದಿ ಪ್ರಕಾರ ಬೆಂಗಳೂರು– ಮೈಸೂರು ನಡುವೆ ಅತಿ ವೇಗದ ರೈಲು ಓಡಿಸಲು ನೇರ ಮಾರ್ಗ ನಿರ್ಮಿಸಲಾಗುವುದು. ಅದರಿಂದ ಎರಡೂ ನಗರಗಳ ನಡುವಿನ ಅಂತರ 130 ಕಿ.ಮೀ.ಗಳಿಂದ 100 ಕಿ.ಮೀ.ಗಳಿಗೆ ಇಳಿಯಲಿದೆ. ಗಂಟೆಗೆ ಗರಿಷ್ಠ 200 ಕಿ.ಮೀ. ವೇಗದಲ್ಲಿ  ಓಡಿಸಬಹುದು.  ಪ್ರಯಾಣದ ಅವಧಿ ಕೇವಲ 40 ನಿಮಿಷಗಳು. ಪ್ರತಿ ಹದಿನೈದು ನಿಮಿಷಗಳಿಗೆ ಒಂದು ರೈಲನ್ನು ಓಡಿಸಲು ಸಾಧ್ಯವಿದೆ’ ಎಂದು ಅವರು ಹೇಳಿದರು.

‘ಈ ಯೋಜನೆ ಜಾರಿಯಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ಮೌಲ್ಯದ ಇಂಧನ ಉಳಿಸಬಹುದು. ಜನರ ಪ್ರಯಾಣ ವೆಚ್ಚ ಮತ್ತು ಸಮಯವನ್ನು ತಗ್ಗಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗುವುದರಿಂದ ನೂರಾರು ಜೀವಗಳು ಉಳಿಯುತ್ತವೆ’ ಎಂದು ಅವರು ನುಡಿದರು.

‘ಹತ್ತು ಸಾವಿರ ಕೋಟಿ ರೂಪಾಯಿಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಬಹುದು. ರಾಜ್ಯ ಸರ್ಕಾರ ಶೇಕಡಾ 10ರಷ್ಟು ಹಣ ಅಂದರೆ ಸಾವಿರ ಕೋಟಿ ರೂಪಾಯಿ ಕೊಟ್ಟರೆ ಸಾಕು. ಕೇಂದ್ರ ಸರ್ಕಾರ ಸಾವಿರ ಕೋಟಿ ರೂಪಾಯಿ ಭರಿಸಿದರೆ, ಉಳಿದ ಎಂಟು ಸಾವಿರ ಕೋಟಿ ರೂಪಾಯಿ ಹಣವನ್ನು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಬ್ಯಾಂಕ್‌ ಮೊದಲಾದ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದು. ಈ ಸಾಲವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 40 ವರ್ಷಗಳಷ್ಟು ದೀರ್ಘ ಅವಧಿಗೆ ದೊರಕುತ್ತದೆ. ಮೊದಲ ಹತ್ತು ವರ್ಷಗಳ ಕಾಲ ಮರುಪಾವತಿ ಮಾಡುವಂತಿಲ್ಲ’ ಎಂದು ಅವರು ವಿವರಿಸಿದರು.

‘ಈ ಯೋಜನೆ ಜಾರಿಗೆ ವಿಶೇಷ ಕಂಪೆನಿಯನ್ನು ಸ್ಥಾಪಿಸಿ, ಭೂಸ್ವಾಧೀನಕ್ಕೆ ನೆರವಾಗುವುದಷ್ಟೇ ರಾಜ್ಯ ಸರ್ಕಾರದ ಕೆಲಸ. ಅತಿ ವೇಗದ ರೈಲು ಮಾರ್ಗವು ಪಿಲ್ಲರ್‌ಗಳ ಮೇಲೆ ಹಾದು ಹೋಗುವುದರಿಂದ ಹೆಚ್ಚಿನ ಪ್ರಮಾಣದ ಭೂ ಸ್ವಾಧೀನದ ಅಗತ್ಯವೂ ಬೀಳುವುದಿಲ್ಲ. ಯೋಜನೆ ಜಾರಿಗೆ ಸರ್ಕಾರ, ಇವತ್ತು ನಿರ್ಧಾರ ತೆಗೆದುಕೊಂಡರೆ ಕಾಮಗಾರಿಗಳು ಪೂರ್ಣಗೊಳ್ಳುವುದಕ್ಕೆ ಎಂಟು  ಕಾಲ ಬೇಕಾಗುತ್ತದೆ’ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಹೊಸದರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದರು. ಆಗ ಅಲ್ಲಿನ ಬುಲೆಟ್‌ ರೈಲು‌ ನೋಡಿ, ಬೆಂಗಳೂರು– ಮೈಸೂರು ನಡುವೆ ಬುಲೆಟ್‌ ರೈಲು ಮಾರ್ಗ ನಿರ್ಮಾಣ ಯೋಜನೆ ಕೈಗೊಳ್ಳುವುದಾಗಿ ಘೋಷಿಸಿದರು. ಆಗ ನಾನು ಕೊಚ್ಚಿಯಲ್ಲಿದ್ದೆ. ಪತ್ರಿಕೆಗಳಲ್ಲಿ ಸುದ್ದಿ ನೋಡಿದ ಕೂಡಲೇ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದೆ. 100 ಕಿ.ಮೀ.ಗಳಷ್ಟು ಅಂತರದ ಪ್ರಯಾಣಕ್ಕೆ ಬುಲೆಟ್‌ ರೈಲು ಸೂಕ್ತವಾಗದು ಎಂಬುದನ್ನು ವಿವರಿಸಿದ್ದೆ. ಆ ಪತ್ರಕ್ಕೆ ಸ್ಪಂದನೆ ನೀಡುವ ಸೌಜನ್ಯವನ್ನೂ ಸಿದ್ದರಾಮಯ್ಯ ಅವರು ತೋರಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.