ADVERTISEMENT

ರಾಧಾಕೃಷ್ಣನ್ ವಿರುದ್ಧ ಮಾಧವನ್ ನಾಯರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಬೆಂಗಳೂರು (ಪಿಟಿಐ): ಅಂತರಿಕ್ಷ್ - ದೇವಾಸ್ ಸಂಸ್ಥೆಗಳ ನಡುವೆ ಆಗಿದ್ದ ಒಪ್ಪಂದದಲ್ಲಿ ತಮ್ಮ ವಿರುದ್ಧ ದೋಷಾರೋಪ ಹೊರಿಸಿರುವ ಉನ್ನತ ಮಟ್ಟದ ತಂಡದ ವರದಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಪ್ರತಿಕ್ರಿಯೆ ನೀಡಿದ್ದಾರೆ.

ಅಲ್ಲದೆ, ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ನಾಯರ್, `ವರದಿಯ ಆಯ್ದ ಅಂಶಗಳನ್ನು ಮಾತ್ರ ಬಿಡುಗಡೆ ಮಾಡಿರುವ ರಾಧಾಕೃಷ್ಣನ್ ಹೇಡಿತನ ಪ್ರದರ್ಶಿಸಿದ್ದಾರೆ~ ಎಂದು ಕಟುವಾಗಿ ಟೀಕಿಸಿದ್ದಾರೆ.

`ವರದಿಯಲ್ಲಿ ತಮಗೆ ಅನುಕೂಲಕರವಾಗಿರುವ ಅಂಶಗಳನ್ನು ಮಾತ್ರ  ಅವರು (ಇಸ್ರೊ ಮತ್ತು ರಾಧಾಕೃಷ್ಣನ್) ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದಾರೆ. ಇದು ನಿಜಕ್ಕೂ ಅನ್ಯಾಯ. ವರದಿಯನ್ನು ಸಮಗ್ರವಾಗಿ ಸಾರ್ವಜನಿಕರ ಮುಂದಿಡಬೇಕಿತ್ತು~ ಎಂದು ನಾಯರ್ ಭಾನುವಾರ ಇಲ್ಲಿ ಪ್ರತಿಕ್ರಿಯೆ ನೀಡಿದರು.

`ಉನ್ನತ ಮಟ್ಟದ ತಂಡ ನೀಡಿರುವ ವರದಿಯಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಆದರೆ ಅಂಥ ಆರೋಪ ಮಾಡುವ ಮುನ್ನ ಸಂಬಂಧಪಟ್ಟವರಿಂದ ಯಾವುದೇ ಪ್ರತಿಕ್ರಿಯೆ ಪಡೆದುಕೊಳ್ಳಲಾಗಿಲ್ಲ. ಯಾವುದೇ ತನಿಖೆ ಕೂಡ ನಡೆಸಿಲ್ಲ. ಇದು ನನಗೆ ಆಶ್ಚರ್ಯ ತಂದಿದೆ~ ಎಂದು ನಾಯರ್ ಹೇಳಿದರು.

`ಅಂತರಿಕ್ಷ್ - ದೇವಾಸ್ ಸಂಸ್ಥೆಗಳ ನಡುವೆ ಆಗಿದ್ದ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಬಾಹ್ಯಾಕಾಶ ಇಲಾಖೆಗೆ ಮನವರಿಕೆ ಆಗಿದ್ದರೆ, ಆ ಕುರಿತು ಸಮಗ್ರ ತನಿಖೆ ನಡೆಸಲಿ. ಇಡೀ ಪ್ರಕರಣದ ಬೇರು ಎಲ್ಲಿದೆ ಎಂಬುದನ್ನು ಬಯಲು ಮಾಡಲಿ. ಆದರೆ ಈಗ ಬಹಿರಂಗಪಡಿಸಿರುವ ವರದಿಯಲ್ಲಿ ಹೇಳಿರುವ ಅಂಶಗಳನ್ನು ಸತ್ಯ ಸಂಗತಿಗಳು ಎಂದು ಒಪ್ಪಲು ಸಾಧ್ಯವಿಲ್ಲ. ಇವು ಉನ್ನತ ಮಟ್ಟದ ತಂಡದ ಒಂದಿಬ್ಬರು ಸದಸ್ಯರ ಅಭಿಪ್ರಾಯ ಮಾತ್ರ.

ಆದರೆ ಉನ್ನತಾಧಿಕಾರ ಶಿಫಾರಸು ಸಮಿತಿ ನೀಡಿರುವ ವರದಿಯಲ್ಲಿ ಎಲ್ಲ ಅಂಶಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ಇದು ಅತ್ಯುತ್ತಮ ವರದಿ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.