ADVERTISEMENT

ರಾಮದುರ್ಗ ಬಳಿ ಮದುವೆ ದಿಬ್ಬಣ ಅಪಘಾತ: 10 ಸಾವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ರಾಮದುರ್ಗ (ಬೆಳಗಾವಿ ಜಿಲ್ಲೆ):  ಮಹಾರಾಷ್ಟ್ರದ ಸೋಲಾಪುರದಿಂದ ಬರುತ್ತಿದ್ದ ಮದುವೆ ದಿಬ್ಬಣದ ಲಾರಿಯು ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಸಮೀಪ ಬೆಳಗಾವಿ- ಬಾಗಲಕೋಟೆ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಅಪಘಾತಕ್ಕೀಡಾಗಿ  8 ಮಹಿಳೆಯರು ಸೇರಿ 10 ಜನರು ಮೃತಪಟ್ಟು ಇತರ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಬೈಲಹೊಂಗಲ ತಾಲ್ಲೂಕಿನ ಮಾರಗನಕೊಪ್ಪದಲ್ಲಿ ಭಾನುವಾರ ನಡೆಯಲಿದ್ದ ಸೋಲಾಪುರದ ಶಾಂತಿ ನಗರದ ರವಿ ಗೊಳಸಂಗಿ ಅವರ ಮದುವೆ ದಿಬ್ಬಣದ ಲಾರಿಯು ಇನ್ನೊಂದು ಲಾರಿ ಹಿಂದಿಕ್ಕುವ ಸಂದರ್ಭದಲ್ಲಿ ಅದಕ್ಕೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಮೃತರನ್ನು ಸೋಲಾಪುರದ ಉಮಟಾ ನಾಕಾದ ಕಮಲಾ ಶಿವಾಜಿ ಸಾಳುಂಕೆ (60), ಭವಾನಿ ಪೇಟದ ಶಿವಬಾಯಿ ನಾಗನಾಥ ಸೇಂದ್ರೆ (70), ಕುರಡವಾಡೆಯ ವಿಮಲಾ ಬಾಬುರಾವ್ ವಾಡತೀಲೆ (60), ತುಳಜಾಪುರದ ಸುಮನಾಬಾಯಿ ಸೇಂದ್ರೆ (40), ಕಸ್ತೂರಿಬಾಯಿ ಸೈಮನ್ ಗೊಳಸಂಗಿ (40), ಕಾಂತಾಬಾಯಿ ಪಾಂಡುರಂಗ ವಾಡತೀಲೆ (50), ಪ್ರಭಾವತಿ ವಾಡತೀಲೆ (45), ಆಸೀಫ್ ಸುಲ್ತಾನ್ ಶೇಖ್ (21) ಎಂದು ಗುರುತಿಸಲಾಗಿದೆ. ಸ್ಥಳದಲ್ಲೇ ಮೃತಪಟ್ಟ ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ತೀವ್ರವಾಗಿ ಗಾಯಗೊಂಡ ನಂದಿನಿ ಗೊಳಸಂಗಿ (30) ಎಂಬುವವರು ಮುಧೋಳದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಸಿದ್ಧಪ್ಪ ಸೈಬನ್ ಗೊಳಸಂಗಿ (40), ಸೋನಾಲಿ ಸಿದ್ಧಪ್ಪ ಗೊಳಸಂಗಿ (10), ಅಂಜಲಿ ಕಿಶೋರ ಮೋಹಿತೆ (30), ಕಿಶೋರ ಮೋಹಿತೆ (40), ಮಂಗಳ ಶಿವಾಜಿ ಗೊಳಸಂಗಿ (50), ಅನ್ನಪೂರ್ಣ ಶಿವಾಜಿ ಪೂಜಾರ (20), ಗಜರಾಬಾಯಿ ಅಶೋಕ ಗೊಳಸಂಗಿ (40), ಐಶ್ವರ್ಯ ಕಿಶೋರ ಗೊಳಸಂಗಿ (7), ಮಂಜು ಸೂರ್ಯಕಾಂತ ಸೇಂದ್ರೆ (37), ಅರ್ಚನಾ ಸಂತೋಷ ಸೂರ್ಯವಂಶಿ (25) ಎಂಬುವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಧೋಳ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸಣ್ಣಪುಟ್ಟ ಗಾಯಗೊಂಡವವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ. ಭಾಷಾ ಸಮಸ್ಯೆ ಮತ್ತು ಸಂಬಂಧಿಗಳು ಸ್ಥಳದಲ್ಲಿ ಇಲ್ಲದೇ ಇದ್ದುದರಿಂದ ಶವಗಳ ಗುರುತು ಪತ್ತೆಗಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗಾವಿ ಉತ್ತರ ವಲಯ ಡಿಜಿಪಿ ಕೆ.ಎಸ್.ಆರ್. ಚರಣರಡ್ಡಿ, ಎಸ್ಪಿ ಸಂದೀಪ ಪಾಟೀಲ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.