ADVERTISEMENT

ರಾಮ್‌ದೇವ್ ಭ್ರಷ್ಟಾಚಾರಿ: ಹರಿಪ್ರಸಾದ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:30 IST
Last Updated 12 ಜೂನ್ 2011, 19:30 IST

ಬೆಂಗಳೂರು: ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವಂತೆ ಆಗ್ರಹಿಸಿ ಚಳವಳಿ ಆರಂಭಿಸಿರುವ ಬಾಬಾ ರಾಮ್‌ದೇವ್ ಅವರನ್ನು `ಭ್ರಷ್ಟಾಚಾರಿ~ ಎಂದು ಜರೆದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಲೋಕಪಾಲ ಮಸೂದೆ ಸಮಿತಿಯಲ್ಲಿರುವ ನಾಗರಿಕ ಪ್ರತಿನಿಧಿಗಳ ಮೇಲೂ ವಾಗ್ದಾಳಿ ನಡೆಸಿದರು.

ಇಲ್ಲಿನ ನಂದಿನಿ ಬಡಾವಣೆಯ ಭೈರವೇಶ್ವರ ನಗರದಲ್ಲಿ ಸಾರ್ವಜನಿಕ ಜಾಗೃತಿ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ಬಳಿಕ ಮಾನಾಡಿದ ಅವರು, `ಯೋಗ ಗುರು ಬಾಬಾ ರಾಮ್‌ದೇವ್ ಒಬ್ಬ ಮಹಾನ್ ಭ್ರಷ್ಟಾಚಾರಿ. ಯೋಗದ ಮೂಲಕ ಜನರನ್ನು ಮರಳು ಮಾಡುತ್ತಿರುವ ಅವರಿಗೆ ಸಾವಿರಾರು ಕೋಟಿ ರೂಪಾಯಿ ಮೂಲದ ಆಸ್ತಿ ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು~ ಎಂದರು.

ರಾಮ್‌ದೇವ್ ಆರ್‌ಎಸ್‌ಎಸ್ ಕೈಗೊಂಬೆ. ಕಪ್ಪುಹಣವನ್ನು ದೇಶಕ್ಕೆ ತರುವ ವಿಷಯದಲ್ಲಿ ಕೇಂದ್ರ ಬದ್ಧತೆ ಪ್ರಕಟಿಸಿದ ಬಳಿಕವೂ ಅವರು ಉಪವಾಸ ಮುಂದುವರೆಸಿದರು. ಇದರ ಹಿಂದೆ ರಾಜಕೀಯ ಶಕ್ತಿಗಳ ಪ್ರೇರಣೆ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅಕ್ರಮವಾಗಿ ಹಣ ಸಂಪಾದನೆ ಮಾಡಿರುವವರಿಗೆ ಕಪ್ಪುಹಣದ ವಿರುದ್ಧ ಹೋರಾಡುವ ನೈತಿಕ ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿದರು.

`ಭ್ರಷ್ಟರ ಸಮಿತಿ~: `ಲೋಕಪಾಲ ಮಸೂದೆ ಸಮಿತಿಯಲ್ಲಿರುವ ನಾಗರಿಕ ಸಮಿತಿಯೇ ಭ್ರಷ್ಟರ ಸಮಿತಿಯಾಗಿದೆ. ಶಾಂತಿಭೂಷಣ್ ಅವರ ಆಸ್ತಿಯ ಮೊತ್ತವನ್ನು ಗಮನಿಸಿದರೆ ಅವರ ಸಾಚಾತನ ಅರ್ಥವಾಗುತ್ತದೆ~ ಎಂದು ಟೀಕಿಸಿದರು.ಅಣ್ಣಾ ಹಜಾರೆ ಅವರ ಬಗ್ಗೆ ತಮಗೆ ಗೌರವವಿದೆ.

ಆದರೆ ಅವರ ಜೊತೆಯಲ್ಲಿರುವ ಎಲ್ಲರೂ ಅದೇ ವ್ಯಕ್ತಿತ್ವ ಹೊಂದಿಲ್ಲ. ತಮಗೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಎಲ್ಲಿಂದ ಬಂತು ಎಂಬುದನ್ನು ಶಾಂತಿಭೂಷಣ್ ಅವರೇ ವಿವರಿಸಲಿ ಎಂದು ಸವಾಲು ಹಾಕಿದರು.

ತನಿಖೆ ಏಕಿಲ್ಲ?: ಭ್ರಷ್ಟಾಚಾರದ ಬಗ್ಗೆ ದೇಶದಾದ್ಯಂತ ಭಾಷಣ ಮಾಡುತ್ತಿರುವ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಕರ್ನಾಟಕ ಭ್ರಷ್ಟಾಚಾರದಲ್ಲಿ  ಮೊದಲ ಸ್ಥಾನದಲ್ಲಿದೆ. ಈ ಕಳಂಕ್ನ ತೊಡೆದುಹಾಕುವ ಮಹತ್ವದ ಜವಾಬ್ದಾರಿ ಲೋಕಾಯುಕ್ತರ ಮೇಲಿದೆ. ಸಂತೋಷ್ ಹೆಗ್ಡೆ ಮೊದಲು ಯಡಿಯೂರಪ್ಪ ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲಿ. ನಂತರ ಲೋಕಪಾಲ ಮಸೂದೆ ಜಾರಿ ಬಗ್ಗೆ ಮಾತನಾಡಲಿ~ ಎಂದರು.

`ಎಲ್.ಕೆ.ಆಡ್ವಾಣಿ ನನಗೆ ತಂದೆ ಸಮಾನ ಎಂದು ಲೋಕಾಯುಕ್ತರು ಹೇಳುತ್ತಾರೆ. ಯಡಿಯೂರಪ್ಪ ಕೂಡ ಆಡ್ವಾಣಿ ಅವರನ್ನು ತಂದೆಯ ಸಮಾನ ಎನ್ನುತ್ತಾರೆ. ಹಾಗಾದರೆ ಲೋಕಾಯುಕ್ತರು ಮತ್ತು ಯಡಿಯೂರಪ್ಪ ದಾಯಾದಿಗಳಾಗಿದ್ದಾರೆ~ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.