ADVERTISEMENT

ರೆಡ್ಡಿ ಬಂಧನ: ಬಳ್ಳಾರಿ ಬಂದ್, ಕಚೇರಿಗಳ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 6:30 IST
Last Updated 6 ಸೆಪ್ಟೆಂಬರ್ 2011, 6:30 IST

ಬಳ್ಳಾರಿ : ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಹಾಗೂ ಓಎಂಸಿಯ ಮುಖ್ಯಸ್ಥ ಶ್ರೀನಿವಾಸರೆಡ್ಡಿ ಅವರನ್ನು ಸಿಬಿಐ ಬಂಧಿಸಿರುವ ಕ್ರಮವನ್ನು ಪ್ರತಿಭಟಿಸಿ ಮಂಗಳವಾರ ರೆಡ್ಡಿ ಬೆಂಬಲಿಗರು ಕರೆ ನೀಡಿದ್ದ ಬಳ್ಳಾರಿ ಬಂದ್ ವೇಳೆ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ, ಪೀಠೊಪಕರಣಗಳನ್ನು ಹಾನಿಗೊಳಿಸಲಾಗಿದೆ.

ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದು, ವಾಹನ ಸಂಚಾರ ಸ್ಥಗಿತಗೊಂಡು, ನಗರದಾದ್ಯಂತ ನೀರವ ಮೌನ ಮನೆ ಮಾಡಿದೆ. ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಮಂಗಳವಾರ ಒಂದು ದಿನದ ರಜೆ ಘೋಷಿಸಲಾಗಿತ್ತು.

ನಗರದ ಪ್ರಮುಖ ಸ್ಥಳಗಳಲ್ಲಿ ರೆಡ್ಡಿ ಅವರ ಅಭಿಮಾನಿಗಳು ಟೈರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸುವ ದೃಶ್ಯಗಳು ಕಂಡುಬಂದವು. ಉದ್ರಿಕ್ತ ಗುಂಪೊಂದು ಸರ್ಕಾರಿ ನೌಕರರು ಕಾರ್ಯನಿರ್ವಹಿಸುವುದನ್ನು ಆಕ್ಷೇಪಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ನಗರಾಭಿವೃದ್ಧಿ ಕೋಶದ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಜತೆಗೆ ಆರ್‌ಟಿಓ ಹಾಗೂ ಅರಣ್ಯ ಇಲಾಖೆ ಕಚೇರಿಗಳ ಮೇಲೆ ದಾಳಿ ನಡೆಸಿ ಕಂಪ್ಯೂಟರ್, ಕುರ್ಚಿ, ಟೇಬಲ್, ಕಿಟಕಿ ಗಾಜುಗಳು ಒಡೆದು ದಾಂಧಲೆ ನಡೆಸಿದರು.
 
ದಾಳಿ ನಡೆಸಿದ ದುಷ್ಕರ್ಮಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇತರರಿಗಾಗಿ ಶೋಧ ನಡೆಸಿದ್ದಾರೆ. ಸಿರಗುಪ್ಪ ಹಾಗೂ ಕಂಪ್ಲಿಯಲ್ಲಿ ಸಹ ಬಂದ್ ಶಾಂತಿಯುತವಾಗಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.