ಬೆಂಗಳೂರು: ರೇಷ್ಮೆ ಇಲಾಖೆಯ ಬೆಲೆ ಸ್ಥಿರೀಕರಣ ನಿಧಿ ಪ್ರಾಧಿಕಾರವನ್ನು ಪುನಶ್ಚೇತನಗೊಳಿಸುವುದು; ಆಮದು ಶುಲ್ಕ ಕಡಿತ ಮಾಡಿರುವುದನ್ನು ರದ್ದುಗೊಳಿಸಿ, ಹಿಂದೆ ಇದ್ದ ರೀತಿಯಲ್ಲೇ ಆಮದು ಶುಲ್ಕ ವಿಧಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವುದು ಸೇರಿದಂತೆ ಇತರ ನಿರ್ಧಾರಗಳನ್ನು ಶನಿವಾರದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ರೇಷ್ಮೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾಗಿರುವ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಅವರು ವಿಕಾಸ ಸೌಧದಲ್ಲಿ ರೇಷ್ಮೆ ಬೆಳೆಗಾರರು, ರೀಲರುಗಳು, ವರ್ತಕರು, ಹುರಿಕಾರರು, ನೇಕಾರರು, ರಫ್ತುದಾರರು, ಆಮದುದಾರರು ಮತ್ತು ಖಾಸಗಿ ಮೊಟ್ಟೆ ತಯಾರಕರ ಸಭೆ ಕರೆದಿದ್ದರು.
ಈ ಸಭೆಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರು, ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರೂ ಭಾಗವಹಿಸಿದ್ದರು.ರೇಷ್ಮೆ ಮಾರುಕಟ್ಟೆ ಮತ್ತು ವಿನಿಮಯ ಕೇಂದ್ರದ ವಹಿವಾಟುಗಳನ್ನು ಪ್ರತಿನಿತ್ಯ ಗಮನಿಸಿ, ಅಗತ್ಯ ಇದ್ದಲ್ಲಿ ಬೆಲೆ ಸ್ಥಿರೀಕರಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರೇಷ್ಮೆ ನೂಲು ಖರೀದಿಸಲು ಅನುಕೂಲವಾಗುವಂತೆ ರೇಷ್ಮೆ ಮಾರಾಟ ಮಂಡಳಿಗೆ ಅಗತ್ಯ ಹಣಕಾಸಿನ ನೆರವು ಮುಂದುವರೆಸುು; ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಕೇಂದ್ರ ರೇಷ್ಮೆ ಮಂಡಳಿಯ ಸಲಹೆ ಮತ್ತು ಆರ್ಥಿಕ ಸಹಕಾರವನ್ನು ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸಚಿವ ಬಚ್ಚೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.