ADVERTISEMENT

ರೈತರಿಗೆ ನೀಡುವ ಸಹಾಯಧನ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2011, 19:30 IST
Last Updated 20 ನವೆಂಬರ್ 2011, 19:30 IST
ರೈತರಿಗೆ ನೀಡುವ ಸಹಾಯಧನ ಹೆಚ್ಚಿಸಿ
ರೈತರಿಗೆ ನೀಡುವ ಸಹಾಯಧನ ಹೆಚ್ಚಿಸಿ   

ಬೆಂಗಳೂರು: ಐರೋಪ್ಯ ರಾಷ್ಟ್ರಗಳ ರೈತರಿಗೆ ಅಲ್ಲಿನ ಸರ್ಕಾರಗಳಿಂದ ದೊಡ್ಡ ಪ್ರಮಾಣದ ಸಹಾಯಧನ ಲಭಿಸುವ ಮಾದರಿಯಲ್ಲೇ ಇಲ್ಲಿನ ಸರ್ಕಾರಗಳೂ ರೈತರಿಗೆ ಹೆಚ್ಚಿನ ಸಹಾಯಧನ ನೀಡಬೇಕು ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಒತ್ತಾಯಿಸಿದರು.

ಐರೋಪ್ಯ ರಾಷ್ಟ್ರಗಳ ರೈತರ ಆರೋಗ್ಯ ಸಂಬಂಧಿ ವೆಚ್ಚಗಳು ಮತ್ತು ಅವರ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಅಲ್ಲಿನ ಸರ್ಕಾರಗಳೇ ಸಂಪೂರ್ಣವಾಗಿ ನೋಡಿಕೊಳ್ಳುತಿವೆ. ಶ್ರೇಷ್ಠ ಗುಣಮಟ್ಟದ ಶಿಕ್ಷಣ ಮತ್ತು ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಅಲ್ಲಿ ಸಂಪೂರ್ಣ ಉಚಿತವಾಗಿ ರೈತನಿಗೆ ದೊರೆಯುತ್ತಿವೆ. ಇಲ್ಲಿಯೂ ಅದೇ ಮಾದರಿ ಅನುಸರಿಸಿ, ರೈತರ ಮಕ್ಕಳಿಗೆ ಶ್ರೇಷ್ಠ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೃಷಿ ಮೇಳದ ಕೊನೆಯ ದಿನವಾದ ಭಾನುವಾರ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ರೈತ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, `ಬೆಂಗಳೂರಿನಂತಹ ಮಹಾನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಾಲೆಗಳನ್ನು ತೆರೆಯುವ ಅಗತ್ಯ ಇಲ್ಲ. ರೈತರ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಲು ನಾಡಿನ ಹಳ್ಳಿಗಾಡುಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳನ್ನು ಆರಂಭಿಸಬೇಕಿದೆ~ ಎಂದರು.

`ಸರ್ಕಾರದ ಕರ್ತವ್ಯ~: ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ರೈತರಿಗೆ ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯ. ಐರೋಪ್ಯ ರಾಷ್ಟ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು `ನೇರ ಮಾರುಕಟ್ಟೆ~ ವ್ಯವಸ್ಥೆ ಈಗಾಗಲೇ ಜಾರಿಯಾಗಿದೆ. ಭಾರತದಲ್ಲೂ ಈ ವ್ಯವಸ್ಥೆ ನನಸಾಗುವ ದಿನ ದೂರವಿಲ್ಲ. ದೇಶದ ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಪ್ರತ್ಯೇಕ, ಶಾಶ್ವತ ನಿಧಿಯೊಂದರ ಅವಶ್ಯಕತೆಯೂ ಇದೆ ಎಂದರು.

ನಮ್ಮ ದೇಶದ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಳ ಕಂಡಿದ್ದರೂ ಅದು ಉಳಿದ ದೇಶಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲೇ ಇದೆ. ಒಂದು ಹೆಕ್ಟೇರ್ ಭೂಮಿಯಲ್ಲಿ ಕೆಲವು ದೇಶಗಳಲ್ಲಿ ಏಳು ಟನ್ ಬತ್ತ ಬೆಳೆಯುತ್ತಾರೆ. ಆದರೆ ನಮ್ಮ ದೇಶದಲ್ಲಿ ಇದರ ಪ್ರಮಾಣ ಇನ್ನೂ ಮೂರು ಟನ್‌ಗೆ ಸೀಮಿತವಾಗಿದೆ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದರು.

ಬಿಹಾರದ ರಾಜೇಂದ್ರ ಕೃಷಿ ವಿ.ವಿ ವಿಶ್ರಾಂತ ಕುಲಪತಿ ಡಾ.ಡಿ.ಜಿ. ತ್ರಿವೇದಿ, ಬೆಂಗಳೂರು ಕೃಷಿ ವಿ.ವಿ. ಕುಲಪತಿ ಡಾ.ಕೆ. ನಾರಾಯಣ ಗೌಡ ಇತರರಿದ್ದರು.

ಕೃಷಿ ಸಾಧಕರು...
ರಾಷ್ಟ್ರೀಯ ಕೃಷಿ ಮೇಳದ ಅಂತಿಮ ದಿನವಾದ ಭಾನುವಾರ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ಸ್ವೀಕರಿಸಿದ ಕೃಷಿ ಕ್ಷೇತ್ರದ ಸಾಧಕರು ಇವರು:

ಬಿ.ಎ. ನಾಗರಾಜು, ಕೋಲೂರು, ಬೆಂಗಳೂರು ದಕ್ಷಿಣ ತಾಲ್ಲೂಕು; ಸಂಯುಕ್ತ ಮಹೇಶ್, ರಾಮೋಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕು; ಬಿ.ಎಸ್. ಧನಪಾಲ್, ಬಸವನಹಳ್ಳಿ ಗ್ರಾಮ, ಸೋಮವಾರಪೇಟೆ ತಾಲ್ಲೂಕು.
ಪೋಡಮಾಡ ಸ್ವಾತಿ ಕುಟ್ಟಯ್ಯ, ದೇವನೂರು ಗ್ರಾಮ, ವಿರಾಜಪೇಟೆ ತಾಲ್ಲೂಕು; ಎಸ್.ಆರ್. ಅರುಣ್ ಕುಮಾರ್, ಶೆಟ್ಟಿಕೆರೆ, ಚಿಕ್ಕನಾಯಕನ ಹಳ್ಳಿ ತಾಲ್ಲೂಕು; ಭಾಗ್ಯಮ್ಮ, ದಬ್ಬೆಘಟ್ಟ, ತುರುವೇಕೆರೆ ತಾಲ್ಲೂಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.