ADVERTISEMENT

ಲಗೇಜು ಬಿಟ್ಟು ಬಂದ ಏರ್ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಬೆಂಗಳೂರು: ಏರ್ ಇಂಡಿಯಾ ವಿಮಾನ ಸಂಸ್ಥೆಯ ಸಿಬ್ಬಂದಿ ಮುಂಬೈನಿಂದ ಬೆಂಗಳೂರಿಗೆ ಬಂದ ಎಂಬತ್ತು ಪ್ರಯಾಣಿಕರ ಲಗೇಜುಗಳನ್ನು ಮುಂಬೈನಲ್ಲೇ ಬಿಟ್ಟು ಬಂದ ಘಟನೆ ನಡೆದಿದೆ.

ಮುಂಬೈನಿಂದ ಸಂಜೆ ಆರು ಗಂಟೆಗೆ ಹೊರಟ ಏರ್ ಇಂಡಿಯಾ (607) ವಿಮಾನದಲ್ಲಿ ಎಂಬತ್ತು ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದರು. ಆದರೆ ಅವರು ಇಲ್ಲಿಗೆ ಬಂದ ನಂತರ ಆಶ್ಚರ್ಯ ಕಾದಿತ್ತು. ಒಬ್ಬ ಪ್ರಯಾಣಿಕರ ಲಗೇಜನ್ನೂ ವಿಮಾನದ ಸಿಬ್ಬಂದಿ ತಂದಿರಲಿಲ್ಲ.

`ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಲಗೇಜು ಇಲ್ಲದಿರುವುದು ಗೊತ್ತಾ ಯಿತು. ಈ ಬಗ್ಗೆ ವಿಮಾನದ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡಿದರು. ಮನೆಯ ಕೀಯನ್ನು ಲಗೇಜಿನ ಜತೆ ಇಟ್ಟಿದ್ದೆ. ಇದರಿಂದಾಗಿ ತೀವ್ರ ತೊಂದರೆ ಅನುಭವಿಸಬೇಕಾಗಿದೆ~ ಎಂದು ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಪ್ರಕಾಶ್ ರಾವ್ ಹೇಳಿದರು.

`ಎಲ್ಲ ಪ್ರಯಾಣಿಕರಿಗೆ ಅರ್ಜಿ ಯೊಂದನ್ನು ನೀಡಿದ ಅವರು ಲಗೇಜಿನ ವಿವರಗಳನ್ನು ನಮೂದಿಸಿಕೊಂಡರು. ಲಗೇಜನ್ನು ಬುಧವಾರ ಮನೆಗೇ ತಲುಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆಯೂ ಭರವಸೆ ಇಲ್ಲ~ ಎಂದು ಅವರು ಹೇಳಿದರು.

`ಕೆಲವು ಪ್ರಯಾಣಿಕರು ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿತ್ತು. ಆದರೆ ಸಿಬ್ಬಂದಿ ಎಸಗಿದ ಪ್ರಮಾದದಿಂದ ಎಲ್ಲರಿಗೂ ತೊಂದರೆ ಆಗಿದೆ. ಒಬ್ಬ ಪ್ರಯಾಣಿಕನ ಲಗೇಜನ್ನು ಬಿಟ್ಟು ಬಂದ ಬಗ್ಗೆ ಕೇಳಿದ್ದೇನೆ. ಆದರೆ ಏರ್ ಇಂಡಿಯಾ ಸಿಬ್ಬಂದಿ ಎಲ್ಲ ಪ್ರಯಾಣಿಕರ ಲಗೇಜನ್ನು ಬಿಟ್ಟು ಬಂದಿದ್ದಾರೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.