ಬೆಂಗಳೂರು: ವಾರ್ತಾ ಮತ್ತು ಮೂಲ ಸೌಕರ್ಯ ಸಚಿವ ಸಂತೋಷ್ ಲಾಡ್ ಅವರ ರಾಜೀನಾಮೆ ಪಡೆಯುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಪಟ್ಟೊಂದನ್ನು ಹಾಕಿದ್ದಾರೆಯೇ?
ಹೀಗೊಂದು ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಲಾಡ್ ರಾಜೀನಾಮೆಯಿಂದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪಕ್ಷಕ್ಕೆ ಆಗುವ ಮುಜುಗರವನ್ನು ತಪ್ಪಿಸುವುದು ಒಂದು ಕಾರಣವಾದರೆ, ಇನ್ನೊಂದು ಪ್ರಮುಖ ಕಾರಣ ‘ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ಅವರು ಸಚಿವ ಸಂಪುಟಕ್ಕೆ ಸೇಪರ್ಡೆಯಾಗುವುದನ್ನು ತಡೆಯುವುದೂ ಆಗಿದೆ’ ಎಂದೇ ಭಾವಿಸಲಾಗುತ್ತಿದೆ.
ಲಾಡ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎನ್ನುವ ಒತ್ತಾಯ ಹೊಸದೇನೂ ಅಲ್ಲ. ಅವರು ಸಂಪುಟಕ್ಕೆ ಸೇರಿದ ದಿನದಿಂದಲೂ ಇಂತಹ ಬೇಡಿಕೆ ಬರುತ್ತಲೇ ಇತ್ತು. ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಅವರು ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಾ ಒತ್ತಾಯಿಸುತ್ತಲೇ ಇದ್ದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರೂ ವೈಯಕ್ತಿಕವಾಗಿ ಮುಖ್ಯಮಂತ್ರಿಗೆ ಪತ್ರವನ್ನೂ ಬರೆದಿದ್ದರು. ಹಿರೇಮಠ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ದಾಖಲೆಗಳನ್ನು ನೀಡಿದ್ದರು. ಆ ಮಟ್ಟಿಗೆ ಇದು ಹಿರೇಮಠ ಅವರ ಜಯ ಎನ್ನಬಹುದು.
ಬಿಜೆಪಿ ಮುಖಂಡರೂ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಸಂತೋಷ್ ಲಾಡ್ ಕೈಬಿಡುವಂತೆ ಒತ್ತಾಯಿಸಿದ್ದರು. ರಾಜ್ಯಪಾಲರೂ ಕೂಡ ‘ಲಾಡ್ ಅವರನ್ನು ಕೈಬಿಡುವಂತೆ ಸಾಕಷ್ಟು ಒತ್ತಾಯ, ಮನವಿ, ದಾಖಲೆಗಳು ನನಗೆ ಬಂದಿವೆ. ಎಲ್ಲವನ್ನೂ ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದೇನೆ. ಅವರಿಂದ ಉತ್ತರ ಬಂದಿಲ್ಲ’ ಎಂದು ಬಹಿರಂಗವಾಗಿ ಹೇಳಿದ್ದರೂ, ಲಾಡ್ ಅವರ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗೆ ಸೂಚಿಸಿದ್ದರು ಎಂದೂ ಹೇಳಲಾಗುತ್ತಿದೆ.
ಇತ್ತೀಚೆಗೆ ದೆಹಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಡೆಸಿದ ತ್ರೈಮಾಸಿಕ ಪರಿಶೀಲನಾ ಸಭೆ ಹಾಗೂ ಸಮನ್ವಯ ಸಮಿತಿಯ ಸಭೆಯಲ್ಲಿ ನಿಗಮ ಮಂಡಳಿಗಳ ನೇಮಕಾತಿಯ ಜೊತೆಗೆ ಸಚಿವ ಸಂಪುಟ ವಿಸ್ತರಣೆ ಕುರಿತಂತೆಯೂ ಚರ್ಚೆಯಾಗಿತ್ತು. ಇದರ ಬಳಿಕ ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ಅವರು ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳುವಂತೆ ಒತ್ತಡ ಹೆಚ್ಚಿಸಿದ್ದರು.
ಲಾಡ್ ಅವರನ್ನು ಸಂಪುಟದಿಂದ ಕೈಬಿಟ್ಟರೆ ಈ ಇಬ್ಬರು ಸಂಪುಟ ಸೇರುವುದನ್ನು ತಡೆಯಬಹುದು ಅಥವಾ ಕೆಲ ಕಾಲ ಮುಂದೂಡಬಹುದು ಎಂಬ ಲೆಕ್ಕಾಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎಂದು ಹೇಳಲಾಗಿದೆ. ಲಾಡ್ ಕೈಬಿಡುವಂತೆ ವಿರೋಧಪಕ್ಷಗಳ ಒತ್ತಾಯಕ್ಕಿಂತ ಕಾಂಗ್ರೆಸ್ ಪಕ್ಷದಲ್ಲಿಯೇ ಹೆಚ್ಚಿನ ಒತ್ತಡ ಇತ್ತು ಎಂದೂ ಮೂಲಗಳು ಹೇಳಿವೆ.
ತಪ್ಪಿದ ಅಸ್ತ್ರ: ಲಾಡ್ ರಾಜೀನಾಮೆ ನೀಡಿರುವುದರಿಂದ ವಿಧಾನ ಮಂಡಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳಿಗೆ ಗಲಾಟೆ ಎಬ್ಬಿಸಲು ಇದ್ದ ಪ್ರಮುಖ ‘ಅಸ್ತ್ರ’ ಕೈತಪ್ಪಿದಂತಾಗಿದೆ. ಇದರಿಂದಾಗಿ ಸಿದ್ದರಾಮಯ್ಯ ಎಲ್ಲೋ ನೋಡಿಕೊಂಡು ಇನ್ನೆಲ್ಲೋ ಬಾಣ ಬಿಡುತ್ತಿದ್ದಾರೆ. ಅದು ಗುರಿ ಮುಟ್ಟಿತೆ ಎನ್ನುವುದು ಕೆಲ ದಿನಗಳ ನಂತರ ಗೊತ್ತಾಗಲಿದೆ.
‘ನಾನೇನೂ ತಪ್ಪು ಮಾಡಿಲ್ಲ. ರಾಜೀನಾಮೆ ನೀಡುವಂತೆ ನನ್ನ ಮೇಲೆ ಒತ್ತಡವೂ ಇರಲಿಲ್ಲ. ಆದರೆ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದೆ’ ಎಂದು ಸಂತೋಷ್ ಲಾಡ್ ಹೇಳಿದ್ದಾರೆ. ತಪ್ಪೇ ಮಾಡಿಲ್ಲ ಎಂದಾದರೆ ಮುಜುಗರದ ಮಾತು ಎಲ್ಲಿಯದು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.