ಬಳ್ಳಾರಿ: ಬಳ್ಳಾರಿಯಿಂದ ಹೈದರಾಬಾದ್‌ನತ್ತ ಲಾರಿ ಮೂಲಕ ಸಾಗಿಸಲಾಗುತ್ತಿದ್ದ ರೂ 4.95 ಕೋಟಿ ನಗದನ್ನು ಆಂಧ್ರಪ್ರದೇಶದ ಗುಂತಕಲ್ ಪೊಲೀಸರು ಗುರುವಾರ ಸಂಜೆ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ಹಾಗೂ ಕಡಪ ಮೂಲದ ಈಶ್ವರರೆಡ್ಡಿ, ವೆಂಕಟರಾಮರೆಡ್ಡಿ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಗುಂತಕಲ್‌ನ ಹನುಮಾನ್ ವೃತ್ತದಲ್ಲಿ ಲಾರಿಯ (ಸಂಖ್ಯೆ ಎಪಿ- 04 ಎಕ್ಸ್ 9009) ತಪಾಸಣೆ ನಡೆಸಿದ ಸಂದರ್ಭ ಗೋಣಿ ಚೀಲದಲ್ಲಿ ಇರಿಸಲಾಗಿದ್ದ ಅಪಾರ ಪ್ರಮಾಣದ ನಗದು ಇರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗುಂತಕಲ್ ನಗರ-1 ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಳ್ಳಾರಿಯಲ್ಲಿ ಈ ಹಣವನ್ನು ಯಾರಿಂದ ಪಡೆದು, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
`ಲಾರಿಯಲ್ಲಿ ಹಣ ಸಾಗಿಸುತ್ತಿದ್ದ ಮಾಹಿತಿಯು, ಸಂಜೆ 4ರ ವೇಳೆಗೆ ಬಳ್ಳಾರಿ ಪೊಲೀಸರಿಗೂ ಲಭಿಸಿತ್ತು. ಆದರೆ, ನಾವು ಕಾರ್ಯಾಚರಣೆ ನಡೆಸುವುದರೊಳಗೆ ಲಾರಿ ಆಂಧ್ರ ಗಡಿಯನ್ನು ದಾಟಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
`ಬಳ್ಳಾರಿ ಪೊಲೀಸರಿಗೆ ಮಾಹಿತಿ ನೀಡಿರುವವರು ಗುಂತಕಲ್ ಪೊಲೀಸರಿಗೂ ಮಾಹಿತಿ ನೀಡಿರಬಹುದು.
ಹೆಚ್ಚಿನ ವಿವರ ಕಲೆ ಹಾಕಲು ಗುಂತಕಲ್ ಪೊಲೀಸರು ಬಂಧಿತರೊಂದಿಗೆ ನಗರಕ್ಕೆ ಆಗಮಿಸುತ್ತಿದ್ದಾರೆ~ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಬಂಧಿತರಲ್ಲಿ ಒಬ್ಬರಾಗಿರುವ ವೆಂಕಟರಾಮರೆಡ್ಡಿ ಅವರು ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಅವರ ಆಪ್ತರಾಗಿದ್ದಾರೆ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ಇತ್ತೀಚೆಗಷ್ಟೇ ನಗರದಲ್ಲಿ ಬುಡಾ ಅಧ್ಯಕ್ಷ ಗುರುಲಿಂಗನಗೌಡ ಹಾಗೂ ಜನಾರ್ದನರೆಡ್ಡಿ ಸಂಬಂಧಿ ಭಾಸ್ಕರರೆಡ್ಡಿ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಸಿಬಿಐ ಸಿಬ್ಬಂದಿ, ವೆಂಕಟರಾಮರೆಡ್ಡಿ ಅವರ ಮನೆಯ ಮೇಲೂ ದಾಳಿ ನಡೆಸುವ ಯೋಜನೆ ಹಾಕಿಕೊಂಡಿದ್ದರು.
ಆದರೆ, ಅವರ ಬಳಿಯಿದ್ದ ವಿಳಾಸದಲ್ಲಿ ವೆಂಕಟರೆಡ್ಡಿ ನಿವಾಸ ದೊರೆತಿರಲಿಲ್ಲ ಎಂಬ ಕಾರಣದಿಂದ ದಾಳಿ ನಡೆಸದೆ ಮರಳಿದ್ದರು.
ಪೊಲೀಸರು ವಶಪಡಿಸಿಕೊಂಡಿರುವ ಲಾರಿಯು ಆಂಧ್ರದ ಕಡಪ ಜಿಲ್ಲೆಯ ಪೊದ್ದಟೂರು ಪಟ್ಟಣದ್ದಾಗಿದ್ದು, ಅಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರ ಹತ್ತಿರದ ಸಂಬಂಧಿಗಳಿದ್ದಾರೆ.
ಈ ಪ್ರಕರಣದ ತನಿಖೆಗಾಗಿ ಸಿಬಿಐ ತಂಡವೊಂದು ಗುಂತಕಲ್‌ಗೆ ಗುರುವಾರ ರಾತ್ರಿ ಆಗವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.