ADVERTISEMENT

ಲಿಂಗಾಯತ ಧರ್ಮಕ್ಕೆ ಶಿಫಾರಸು: ಸಿದ್ಧಗಂಗಾ ಮಠ ಸ್ವಾಗತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:40 IST
Last Updated 20 ಮಾರ್ಚ್ 2018, 19:40 IST
ಸಿದ್ದಲಿಂಗ ಸ್ವಾಮೀಜಿ
ಸಿದ್ದಲಿಂಗ ಸ್ವಾಮೀಜಿ   

ತುಮಕೂರು: ಲಿಂಗಾಯತ ಮತ್ತು ವೀರಶೈವ ಲಿಂಗಾಯತರಿಗೆ (ಬಸವತತ್ವವನ್ನು ಅನುಸರಿಸುವ) ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕು ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಲು ನಿರ್ಧರಿಸಿರುವುದನ್ನು ಸಿದ್ಧಗಂಗಾ ಮಠ ಸ್ವಾಗತಿಸಿದೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ‘ಎಲ್ಲರನ್ನೂ ಒಳಗೊಂಡು ಹೋಗಬೇಕು ಎನ್ನುವುದೇ ನಮ್ಮ ಆಶಯವಾಗಿತ್ತು. ಲಿಂಗಾಯತ ಮತ್ತು ವೀರಶೈವ ಇಬ್ಬರನ್ನೂ ಸೇರಿಸಿ ಶಿಫಾರಸು ಮಾಡಲು ಮುಂದಾಗಿರುವ ಕ್ರಮ ಸಂತೋಷ ತಂದಿದೆ’ ಎಂದರು.

ಅಲ್ಪಸಂಖ್ಯಾತರ ಸೌಲಭ್ಯಗಳು ಸಮಾಜಕ್ಕೆ ದೊರೆತರೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅಭಿವೃದ್ಧಿ ಸಾಧ್ಯ. ಈ ನಿರ್ಧಾರದಿಂದ ಸಮಾಜದ ಅಭಿವೃದ್ಧಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ADVERTISEMENT

ಜೈನಧರ್ಮದವರು ಹಿಂದೂ ಧರ್ಮದ ಕೆಲವು ಆಚರಣೆಗಳನ್ನು ಅನುಸರಿಸುತ್ತಿದ್ದಾರೆ. ಆದರೂ ಅವರಿಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡಲಾಗಿದೆ. ಪ್ರತ್ಯೇಕ ಸ್ಥಾನ ನೀಡಿದ ತಕ್ಷಣ ಹಿಂದೂ ಧರ್ಮಕ್ಕೆ ಧಕ್ಕೆ ಆಗುವುದಿಲ್ಲ. ಹಿಂದೂ ಧರ್ಮ ಆಳವಾಗಿ ಬೇರು ಬಿಟ್ಟಿದೆ ಎಂದರು.

ಕೆಲವು ಮಠಾಧೀಶರು ಪ್ರತ್ಯೇಕ ಸ್ಥಾನಮಾನಕ್ಕೆ ವಿರೋಧ ವ್ಯಕ್ತಪಡಿಸಿರಬಹುದು. ಅದು ಅವರ ವೈಯಕ್ತಿಕ ನಿರ್ಧಾರ. ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.