
ಕಾರವಾರ: ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್ ಮಾಡುವ ಮೂಲಕ 5 ವರ್ಷದ ಬಾಲಕಿ ಪ್ರಿಯದರ್ಶಿನಿ ಎಂ. ಹಿರೇಮಠ ಹೊಸ ದಾಖಲೆ ಬರೆದಳು.
ಬುಧವಾರ ಕೈಗಾದ ವಸತಿ ಸಂಕೀರ್ಣದ ಸ್ಕೇಟಿಂಗ್ ರಿಂಕ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಪ್ರಿಯದರ್ಶಿನಿ ಈ ಸಾಧನೆ ಮಾಡಿದಳು. 50 ಮೀಟರ್ ದೂರದವರೆಗೆ ನೆಲದಿಂದ 6.50 ಇಂಚು ಎತ್ತರದಲ್ಲಿ ಒಟ್ಟು 40 ಬಾರ್‌ಗಳನ್ನು ಅಡ್ಡಲಾಗಿ ಇಡಲಾಗಿತ್ತು. ಈ ಬಾರ್‌ಗಳ ಅಡಿಯಲ್ಲಿ ಹಿಮ್ಮುಖವಾಗಿ ನುಸುಳಿ ಕೇವಲ 22 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದಳು.
ನಂತರ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಅದೇ ರೀತಿಯಲ್ಲಿ ನುಸುಳಿ ನೆರೆದಿದ್ದವರ ಮನಗೆದ್ದಳು. ಮೂರು ಸುತ್ತುಗಳನ್ನೂ ಯಶಸ್ವಿಯಾಗಿ ಪೂರೈಸಿ, ಎಲ್ಲರ ಚಪ್ಪಾಳೆಗಿಟ್ಟಿಸಿದಳು.
ದಾಖಲೆ ಘೋಷಣೆ: ವೀಕ್ಷಕರಾಗಿ ಬಂದಿದ್ದ ದೆಹಲಿಯ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಇಂಡಿಯಾ ಮಾರ್ಕೆಟಿಂಗ್ ಮುಖ್ಯಸ್ಥ ಪ್ರಮೋದ್ ರೂಹಿಯಾ ದಾಖಲೆಯನ್ನು ಘೋಷಿಸಿದರಲ್ಲದೇ ಪ್ರಿಯದರ್ಶಿನಿಗೆ ಪ್ರಮಾಣ ಪತ್ರ ವಿತರಿಸಿದರು. ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನ ಮಾರಿಯಾ ಗೋಮ್ಸ್ ಸಹ ವೀಕ್ಷಕರಾಗಿ ಬಂದಿದ್ದರು. ‘ಲಿಂಬೋ ಸ್ಕೇಟಿಂಗ್‌ನಲ್ಲಿ ಪ್ರಿಯದರ್ಶಿನಿಯ ಈ ಸಾಧನೆ ವಿಶ್ವದಾಖಲೆಯಾಗಲಿದೆ’ ಎಂದು ಪ್ರಮೋದ್ ರೂಹಿಯಾ ಸುದ್ದಿಗಾರರಿಗೆ ತಿಳಿಸಿದರು.
‘ಪ್ರಿಯಾದರ್ಶಿನಿಯ ಈ ಸಾಧನೆಯ ಪ್ರದರ್ಶನವನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿದ್ದು, ಅದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಿಕೊಡಲಾಗುವುದು’ ಎಂದು ತರಬೇತುದಾರ ದಿಲೀಪ್ ಹಣಬರ ಹೇಳಿದರು.
* 6 ತಿಂಗಳಿಂದ ಸತತ ಅಭ್ಯಾಸ:
ಪ್ರಿಯದರ್ಶಿನಿ ಕೈಗಾ ಅಣುವಿದ್ಯುತ್ ಸ್ಥಾವರದ ವೈಜ್ಞಾನಿಕ ಸಹಾಯಕ ಮಹಾಂತೇಶ ಹಿರೇಮಠ ಹಾಗೂ ಭಾರತಿ ದಂಪತಿ ಪುತ್ರಿ. ಈಕೆ ಕೈಗಾ ಕೇಂದ್ರೀಯ ವಿದ್ಯಾಲಯದ ಯುಕೆಜಿಯಲ್ಲಿ ಓದುತ್ತಿದ್ದು, ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನ ತರಬೇತುದಾರ ದಿಲೀಪ್ ಹಣಬರ ಗರಡಿಯಲ್ಲಿ ತರಬೇತಿ ಪಡೆದಿದ್ದಾಳೆ.
‘ಮಕ್ಕಳು ಸ್ಕೇಟಿಂಗ್ ಮಾಡುವುದನ್ನು ಕಂಡ ಪ್ರಿಯದರ್ಶಿನಿ ತಾನು ಸ್ಕೇಟಿಂಗ್ ಕಲಿಯುವುದಾಗಿ ತಿಳಿಸಿದಳು. ಬಳಿಕ ಮಗಳನ್ನು ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ಗೆ ತಂದು ಸೇರಿಸಿದೆ. ಕಳೆದ ಎರಡು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಳು. ದಾಖಲೆ ನಿರ್ಮಿಸಲು ಕಳೆದ 6 ತಿಂಗಳಿಂದ ಕಠಿಣ ಪರಿಶ್ರಮ ಹಾಕಿದ್ದಳು.
ಬೆಳಿಗ್ಗೆ 5 ರಿಂದ 6.30 ಹಾಗೂ ಸಂಜೆ 5ರಿಂದ 7 ಹೀಗೆ ನಿತ್ಯ ಸ್ಕೇಟಿಂಗ್ ರಿಂಕ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಳು. ಮಗಳ ಸಾಧನೆಯು ನಮಗೆ ಹಮ್ಮೆ ತಂದಿದ್ದು, ಇದಕ್ಕೆ ಕೈಗಾ ಸ್ಕೇಟಿಂಗ್ ಕ್ಲಬ್ ಸದಸ್ಯರು ಹಾಗೂ ಗೆಳೆಯರ ಸಹಕಾರ ಸ್ಮರಣೀಯ’ ಎಂದು ಮಹಾಂತೇಶ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.