ADVERTISEMENT

ಲೈಂಗಿಕ ಕಿರುಕುಳ: ಡಿಎಫ್‌ಒ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಬಾಗಲಕೋಟೆ: ಮಹಿಳಾ ಸಹೋ­ದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಬಾಗಲಕೋಟೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಎಚ್‌.ಬಿ. ನಾಯಕ ವಿರುದ್ಧ ನವನಗರದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನೊಂದ ಮಹಿಳೆಯು ಮಂಗಳವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಡಿಎಫ್‌ಒ ತಲೆಮರೆಸಿ­ಕೊಂಡಿ­ದ್ದಾರೆ. ಮಹಿಳೆಗೆ ಅನುಕಂಪದ ಆಧಾ­ರದ ಮೇಲೆ  ನೌಕರಿ ನೀಡಲಾಗಿತ್ತು.

ಈ ಮಹಿಳೆ ಬಾದಾಮಿಯಲ್ಲಿ ವಾಸ ವಾಗಿದ್ದು, ಕಚೇರಿ ಕೆಲಸದ ನಿಮಿತ್ತ ಆಗಾಗ ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದಲ್ಲಿರುವ ಸಾಮಾ­ಜಿಕ ಅರಣ್ಯ ವಿಭಾಗದ ಕಚೇರಿಗೆ ಬಂದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡ ಡಿಎಫ್ಒ, ಆಗಾಗ ಮೊಬೈಲ್‌ ಕರೆ­ಗಳನ್ನು ಮಾಡಿ ಲೈಂಗಿಕ ಕಿರುಕುಳ ನೀಡು­ತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.


ಆರೋಪಿಯು ತಮ್ಮ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿರುವುದನ್ನು ನೊಂದ ಮಹಿಳೆ ಧ್ವನಿಮುದ್ರಿಸಿ ಕೊಂಡಿದ್ದು, ಅದನ್ನು ಪೊಲೀಸರಿಗೆ ಸಾಕ್ಷಿಯಾಗಿ ನೀಡಿದ್ದಾರೆ.

ಎಚ್‌.ಬಿ. ನಾಯಕ ನಾಪತ್ತೆ: ಮಹಿಳಾ ಸಹೋದ್ಯೋಗಿಯು ಲೈಂಗಿಕ ಕಿರುಕುಳ ದೂರು ನೀಡಿರುವ ವಿಷಯ ತಿಳಿದು ನಾಯಕ ಕಚೇರಿಗೂ ಬಾರದೆ ನಾಪತ್ತೆಯಾಗಿದ್ದಾರೆ ಎಂದು ನವನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಬಸವರಾಜ ಲಮಾಣಿ ತಿಳಿಸಿದ್ದಾರೆ.

ಮೂಲತಃ ಕಾರವಾರದವರಾದ ನಾಯಕ ಅವರ ಕುಟುಂಬದವರು ಬೆಳಗಾವಿಯಲ್ಲಿ ವಾಸವಾಗಿದ್ದಾರೆ. ನಾಯಕ ಒಬ್ಬರೇ ಬಾಗಲಕೋಟೆ ನವನಗರದಲ್ಲಿರುವ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ವಾಸವಾಗಿದ್ದು, ನಿವೃತ್ತಿಗೆ ಕೇವಲ ಒಂದು ವರ್ಷ ಬಾಕಿ ಉಳಿದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT