ADVERTISEMENT

ಲೈಂಗಿಕ ಕಿರುಕುಳ: ಪ್ರಾಧ್ಯಾಪಕ ಪರಾರಿ?

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಗುಲ್ಬರ್ಗ: ಸಂಶೋಧನಾ ವಿದ್ಯಾರ್ಥಿನಿ­ಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾ­ಗದ ಅಧ್ಯಾಪಕ ಪ್ರೊ. ದಶರಥ ನಾಯಕ ಅವರ ಬಂಧನಕ್ಕೆ ವಿವಿ ಠಾಣೆ ಪೊಲೀಸರು ಶನಿವಾರ ಸಂಜೆಯಿಂದ ತೀವ್ರ ಶೋಧ ಆರಂಭಿಸಿದ್ದಾರೆ. ಲೈಂಗಿಕ ಕಿರುಕುಳ ಮತ್ತು ಹಣಕ್ಕಾಗಿ ಪೀಡಿಸುತ್ತಿ­ದ್ದಾರೆ ಎಂದು ನಾಯಕ್‌ ವಿರುದ್ಧ ಈ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ.

‘ವಿಭಾಗದಲ್ಲಿರುವ ಕಂಪ್ಯೂಟರ್‌­ನಲ್ಲಿ ಅಶ್ಲೀಲ ದೃಶ್ಯಾ­ವಳಿಗಳನ್ನು ಸಂಗ್ರ­ಹಿಸಿಡಲಾಗಿದೆ ಎಂದು ವಿದ್ಯಾ­ರ್ಥಿನಿ ದೂರಿದ್ದಾರೆ. ಹೀಗಾಗಿ ಕಂಪ್ಯೂಟರನ್ನು ವಶಕ್ಕೆ ತೆಗೆದು­ಕೊಂ­ಡಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸ­ಲಾಗು­ವುದು. ಆರೋ­ಪಿಯ ಬಂಧನಕ್ಕೆ  ನಿರ್ದೇಶನ ನೀಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿಯು ವಿದ್ಯಾರ್ಥಿನಿಯ ಸಹೋದರನಿಂದ ₨1ಲಕ್ಷ ಪಡೆದಿದ್ದಾರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಹೀಗಾಗಿ ಈ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗುವುದು’ ಎಂದು ಹೇಳಿದರು. ಕಿರುಕುಳ ಅನುಭವಿಸಿದ ವಿದ್ಯಾರ್ಥಿನಿ ಒಂದು ವಾರದ ಹಿಂದೆಯೇ ಠಾಣೆಗೆ ದೂರು ಸಲ್ಲಿಸಿದ್ದರು. ಮರುದಿನವೇ ಅದನ್ನು ಮಾರ್ಪಡಿಸಿ, ‘ಗೈಡ್‌ ಬದಲಾಯಿಸಬೇಕು ಹಾಗೂ ದುರ್ನಡತೆ ತಿದ್ದಿಕೊಳ್ಳುವಂತೆ ಅವರಿಗೆ ತಾಕೀತು ಮಾಡಿದರೆ ಸಾಕು. ಪ್ರಕರಣಕ್ಕೆ ಪ್ರಚಾರ ಸಿಕ್ಕರೆ  ನನ್ನ ಭವಿಷ್ಯಕ್ಕೆ ತೊಂದರೆಯಾಗುತ್ತದೆ’ ಎಂದು ಸಹೋದರನ ಜತೆ ಬಂದು  ಕೋರಿದ್ದರು ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.