ADVERTISEMENT

ಲೋಕಪಾಲ್‌ ಆಯ್ಕೆ ಸಮಿತಿ ಸಭೆ: ದೂರ ಉಳಿದ ಖರ್ಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಲೋಕಪಾಲ್‌ ಆಯ್ಕೆ ಸಮಿತಿ ಸಭೆಯಲ್ಲಿ ನನ್ನನ್ನು ವಿಶೇಷ ಆಹ್ವಾನಿತ ಎಂದು ಕರೆದಿರುವುದರಿಂದ ಸಭೆಗೆ ಹಾಜರಾಗಲಿಲ್ಲ’ ಎಂದು ಲೋಕಸಭೆ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಪಾಲ್ ಎಂದರೆ ಅಲರ್ಜಿ. ಅವರು ಗುಜರಾತ್‌ನಲ್ಲಿ 13 ವರ್ಷ ಆಡಳಿತ ನಡೆಸಿದರೂ ಲೋಕಾಯುಕ್ತರನ್ನೇ ನೇಮಕ ಮಾಡಲಿಲ್ಲ ಎಂದು ತಿಳಿಸಿದರು.

‘ಲೋಕಪಾಲ್ ಆಯ್ಕೆ ಸಮಿತಿ ಸಭೆಗೆ ನನ್ನನ್ನು ವಿಶೇಷ ಆಹ್ವಾನಿತನನ್ನಾಗಿ ಪರಿಗಣಿಸಲಾಗಿದೆ. ವಿಶೇಷ ಆಹ್ವಾನಿತರಿಗೆ ಲೋಕಪಾಲ್ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ಮಹತ್ವ ಇಲ್ಲ. ವಿಶೇಷ ಆಹ್ವಾನಿತರ ಸಲಹೆಗಳಿಗೂ ಸಭೆಯಲ್ಲಿ ಬೆಲೆ ಇಲ್ಲ. ಹಾಗಾಗಿ ಭಾಗಿಯಾಗುವುದು ವ್ಯರ್ಥ ಎಂಬ ಕಾರಣದಿಂದ ಸಭೆಗೆ ತೆರಳದಿರಲು ನಿರ್ಧರಿಸಿದ್ದೇನೆ’ ಎಂದು ಅವರು ಪ್ರಧಾನಿಯವರಿಗೆ ಬರೆದಿರುವ ಎರಡು ಪುಟಗಳ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾಗಿ ಹೇಳಿದರು.

ADVERTISEMENT

‘ಲೋಕಪಾಲ್‌ ಆಯ್ಕೆ ಕುರಿತು ವಿರೋಧ ಪಕ್ಷಗಳ ಸಲಹೆ– ಸೂಚನೆಗೆ ಅವಕಾಶ ಇರದಿರಲಿ ಎಂಬ ಕಾರಣದಿಂದಲೇ ಆಡಳಿತಾರೂಢ ಬಿಜೆಪಿಯು ಸಂಯೋಜಿತ ಪ್ರಯತ್ನ ಮಾಡಿ ನನ್ನನ್ನು ವಿಶೇಷ ಆಹ್ವಾನಿತನನ್ನಾಗಿ ಕರೆದಿದೆ’ ಎಂದು ಅವರು ದೂರಿದರು.

‘ವಿರೋಧ ಪಕ್ಷಕ್ಕೆ ಸಮಿತಿಯಲ್ಲಿ ಅವಕಾಶ ನೀಡಬೇಕಿತ್ತು. ಆದರೆ, ಉದ್ದೇಶ ಪೂರ್ವಕವಾಗಿಯೇ ನಮ್ಮನ್ನು ಹೊರಗಿರಿಸಿ ಈ ರೀತಿ ಆಹ್ವಾನಿಸಲಾಗಿದೆ. ಇದು ಮೋದಿ ಹಾಗೂ ಕೇಂದ್ರ ಸರ್ಕಾರದ ಮನಸ್ಥಿತಿಯನ್ನು ವ್ಯಕ್ತಪಡಿಸುತ್ತದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಲೋಕಪಾಲ್ ಕಾಯ್ದೆ ರೂಪಿಸಿ ನಾಲ್ಕು ವರ್ಷಗಳೇ ಸಂದಿವೆ. ಕಳೆದ ಬಾರಿ ನಡೆದಿದ್ದ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿಗೆ ಅನುಮೋದನೆ ನೀಡಬಹುದಿತ್ತು. ಲೋಕಪಾಲ್ ಆಯ್ಕೆ ಕೋರಿ ಖಾಸಗಿ ಸಂಸ್ಥೆಯೊಂದು ಸುಪ್ರೀಂ ಕೊರ್ಟ್ ಮೊರೆ ಹೋಗಿದ್ದರಿಂದ, ಕೊರ್ಟ್ ಛೀಮಾರಿ ಹಾಕಬಹುದು ಎಂಬ ಅನುಮಾನದೊಂದಿಗೆ ತರಾತುರಿಯಲ್ಲಿ ಲೋಕಪಾಲ್ ನೇಮಕಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಖರ್ಗೆ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.