ADVERTISEMENT

ಲೋಕಪಾಲ- 21ನೇ ರಾಜ್ಯ ಸಮ್ಮೇಳನದಲ್ಲಿ ಸಿಪಿಐ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಬೆಂಗಳೂರು: ಬಲಿಷ್ಠ ಲೋಕಪಾಲ ಮಸೂದೆಯ ಜಾರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ಆದರೆ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಧಿಕಾರ ಚಲಾಯಿಸುವ `ಸೂಪರ್ ಪವರ್~ ಲೋಕಪಾಲ ಮಸೂದೆ ಜಾರಿಗೆ ಬೆಂಬಲ ನೀಡಲಾಗದು ಎಂದು ಭಾರತ ಕಮ್ಯುನಿಸ್ಟ್ ಪಕ್ಷವು (ಸಿಪಿಐ) ಸ್ಪಷ್ಟಪಡಿಸಿದೆ.

ಗುರುವಾರ ಇಲ್ಲಿ ಆರಂಭವಾದ ಪಕ್ಷದ 21ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಪಿಐ ರಾಷ್ಟ್ರೀಯ ಉಪ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ ರೆಡ್ಡಿ ಅವರು, `ಸಿಬಿಐ ಅನ್ನು ಸ್ವಾಯತ್ತ ತನಿಖಾ ಸಂಸ್ಥೆಯನ್ನಾಗಿಯೇ ಉಳಿಸಿಕೊಳ್ಳಬೇಕು, ಸಂಸದರಿಗೆ ಇರುವ ಸಾಂವಿಧಾನಿಕ ರಕ್ಷಣೆಯನ್ನು ಮುಂದುವರಿಸಬೇಕು~ ಎಂದು ಹೇಳಿದರು.

`ಕಾರ್ಪೊರೆಟ್ ಸಂಸ್ಥೆಗಳ ವ್ಯವಹಾರವನ್ನು ಲೋಕಪಾಲ ವ್ಯಾಪ್ತಿಯಲ್ಲಿ ತರಲು ಕಾಂಗ್ರೆಸ್ ಮತ್ತು ಬಿಜೆಪಿ ಏಕೆ ಸಿದ್ಧವಿಲ್ಲ~ ಎಂದು ಪ್ರಶ್ನಿಸಿದ ಅವರು, `ಮಸೂದೆ ಜಾರಿ ವಿಚಾರದಲ್ಲಿ ಅಣ್ಣಾ ಹಜಾರೆ ಮತ್ತು ಅವರ ತಂಡದ ಸದಸ್ಯರು ತುಸು ಔದಾರ್ಯ ತೋರಬೇಕು~ ಎಂದು ಅಭಿಪ್ರಾಯಪಟ್ಟರು.

`ಪಕ್ಷದಿಂದ ಹೊರಹಾಕಲಿ~
ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಬಿಜೆಪಿಗೆ ಬದ್ಧತೆ ಇದ್ದರೆ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರನ್ನು ಪಕ್ಷದಿಂದ ಕೈಬಿಡಲಿ ಎಂದು ಆಗ್ರಹಿಸಿದರು.

`ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಲ್ಲಿ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಮಾಜಿ ಸಚಿವ ಬಾಬು ಸಿಂಗ್ ಕುಶಾವ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಬಿಜೆಪಿ ಎಸಗಿದ ನಾಚಿಕೆಗೇಡಿನ ಕೃತ್ಯ~ ಎಂದು ವಾಗ್ದಾಳಿ ನಡೆಸಿದರು.

ಕಪ್ಪುಹಣ: `ಮೂಲಗಳ ಪ್ರಕಾರ ಸ್ವಿಸ್ ಬ್ಯಾಂಕ್‌ನಲ್ಲಿ ದೇಶದ ರಾಜಕಾರಣಿಗಳು ಒಟ್ಟು 72 ಲಕ್ಷ ಕೋಟಿ ರೂಪಾಯಿ ಇಟ್ಟಿದ್ದಾರೆ. ಇದು ದೇಶದ ವಾರ್ಷಿಕ ಬಜೆಟ್‌ಗಿಂತ ಆರು ಪಟ್ಟು ಹೆಚ್ಚು. ಈ ಕುರಿತು ನಾನು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾಗ ಬಿಜೆಪಿ ನನ್ನ ಬೆಂಬಲಕ್ಕೆ ಬರಲಿಲ್ಲ, ಕಾಂಗ್ರೆಸ್ ನನ್ನ ಮಾತುಗಳನ್ನು ಲಘುವಾಗಿ ಪರಿಗಣಿಸಿತು~ ಎಂದರು.

ಖಂಡನಾ ನಿರ್ಣಯ: ವಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಹೊಸ ವರ್ಷದ ದಿನ ಪಾಕಿಸ್ತಾನದ ಧ್ವಜ ಹಾರಿಸಿ ಕೋಮುಗಲಭೆ ಪ್ರಚೋದಿಸಲು ಬಿಜೆಪಿ ಸಂಚು ರೂಪಿಸಿತ್ತು. ಜನರ ಭಾವನೆ ಕೆರಳಿಸಿ ಆಡಳಿತ ವೈಫಲ್ಯ ಮುಚ್ಚಿಕೊಳ್ಳುವ ಇಂಥ ಪ್ರಯತ್ನ ಖಂಡಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಸಿದ್ದನಗೌಡ ಪಾಟೀಲ ಹೇಳಿದರು.

ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಪಿ.ವಿ. ಲೋಕೇಶ್, ಮಾಜಿ ಶಾಸಕ ಎಂ.ಸಿ. ನರಸಿಂಹನ್, ಎಐಟಿಯುಸಿ ರಾಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್ ಮತ್ತಿತರರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಸಿಪಿಐ ಕಾರ್ಯಕರ್ತರು ಲಾಲ್‌ಬಾಗ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.