ADVERTISEMENT

ಲೋಕಸಭಾ ಚುನಾವಣೆಯಲ್ಲೂ ನಮ್ಮದೆ ಗೆಲುವು : ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:52 IST
Last Updated 17 ಮೇ 2018, 19:52 IST

ಬೆಂಗಳೂರು: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಬೇಕು. ಯಾಕೆ ಆಗುವುದಿಲ್ಲ ಎಂಬುದನ್ನು ನೋಡಿಯೇ ಬಿಡೋಣ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಈಗಾಗಲೇ 22 ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣವಾಗಿದೆ. ಮುಂದಿನ ಚುನಾವಣೆಯಲ್ಲಿ ಆ ಪಕ್ಷ ಒಂದೂ ಸ್ಥಾನ ಗೆಲ್ಲದಂತೆ ನೋಡಿಕೊಳ್ಳಬೇಕು. ಯಾವುದೇ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆ ಆಗಬಾರದು. ಎಲ್ಲರೂ ಒಂದಾಗಿ ಹೋದರೆ ನಮ್ಮ ಗುರಿ ಈಡೇರಿಕೆ ಅಸಾಧ್ಯವಲ್ಲ’ ಎಂದರು.

ADVERTISEMENT

‘ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ಪರಸ್ಪರ ಟೀಕೆ ಮಾಡಿಕೊಂಡಿದ್ದರು. ಅಧಿಕಾರ ಲಾಲಸೆಯಿಂದ ಈಗ ಬಾಚಿ ತಬ್ಬಿಕೊಂಡಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೂಂಡಾಗಿರಿ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆ. ಗದ್ದಲ ಉಂಟು ಮಾಡಿ ಲೋಕಸಭಾ ಅಧಿವೇಶನ ನಡೆಯದಂತೆ ವಿರೋಧಪಕ್ಷದವರು ನೋಡಿಕೊಂಡರು. ಇಲ್ಲೂ ಅಂತಹುದೇ ಷಡ್ಯಂತ್ರ ನಡೆಸಲು ಮುಂದಾಗಿದ್ದಾರೆ. ಅವರ ಆಟ ನಡೆಯಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಈ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಬೇಸರ ಮಾಡಿಕೊಳ್ಳಬಾರದು. ಕೆಲವು ನಾಯಕರಿಗೆ ಹಿನ್ನಡೆ ಆಗಿದೆ. ಅವರೆಲ್ಲರ ಜತೆಗೆ ನಾವಿದ್ದೇವೆ’ ಎಂದು ಅವರು ಭರವಸೆ ನೀಡಿದರು.

‘ರಾಜ್ಯದಲ್ಲಿ ಐದು ವರ್ಷಗಳಲ್ಲಿ 3,700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ. ಜನರ ನೋವಿಗೆ ಸ್ಪಂದಿಸಬೇಕಿದೆ’ ಎಂದರು.
*
ದೇವೇಗೌಡ–ರಾಹುಲ್‌ ಮಾತುಕತೆ

ನವದೆಹಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಗುರುವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

ಕರ್ನಾಟಕದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಇಬ್ಬರೂ ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.