ADVERTISEMENT

ಲೋಕಾಯುಕ್ತಕ್ಕೆ ವಹಿಸಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಅಕ್ರಮಕ್ಕೆ ಸಂಬಂಧಪಟ್ಟ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಿಐಡಿ ಡಿಜಿಪಿ ಶಂಕರ ಬಿದರಿ ಹೇಳಿದರು.

ಸಿಐಡಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, `ಎಫ್‌ಐಆರ್ ದಾಖಲಿಸಿದ ನಂತರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಎಷ್ಟೇ ಪ್ರಾಮಾಣಿಕವಾಗಿ ತನಿಖೆ ನಡೆಸಿದರೂ ಅಪವಾದ ಬರುವ ಸಾಧ್ಯತೆ ಇದೆ. ಸಿಐಡಿ ಸರ್ಕಾರದ ಅಧೀನದಲ್ಲಿದೆ. ಆದರೆ ಲೋಕಾಯುಕ್ತ ಯಾರ ಅಧೀನದಲ್ಲೂ ಇರದ ಸ್ವತಂತ್ರ ಸಂಸ್ಥೆಯಾಗಿದೆ. ಆದ್ದರಿಂದ ಲೋಕಾಯುಕ್ತ ತನಿಖೆಗೆ ಪ್ರಕರಣವನ್ನು ವರ್ಗಾಹಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ~ ಎಂದರು.

ಈ ಪ್ರಕರಣದ ತನಿಖೆಗೆ ನುರಿತ ಮತ್ತು ಹಿರಿಯ ಎಂಜಿನಿಯರ್‌ಗಳ ಸಲಹೆ ಸೂಚನೆ ಪ್ರತಿ ಹಂತದಲ್ಲೂ ಬೇಕಾಗುತ್ತದೆ. ಆದರೆ ಸಿಐಡಿಯಲ್ಲಿ ಎಂಜಿನಿಯರ್‌ಗಳಿಲ್ಲ. ಲೋಕಾಯುಕ್ತದಲ್ಲಿ ಎಂಜಿನಿಯರ್‌ಗಳಿದ್ದಾರೆ. ಅಲ್ಲದೆ ಈ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಕಾರ್ಯದರ್ಶಿ ಎಚ್.ಟಿ.ಸೋಮಶೇಖರರೆಡ್ಡಿ ಅವರು ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸುವಂತೆ ಕೋರಿದ್ದರು. ಪ್ರಕರಣದ ವರ್ಗಾವಣೆಗೆ ಪತ್ರ ಬರೆಯಲು ಇದೂ ಕಾರಣ ಎಂದು  ವಿವರಿಸಿದರು.

ಅಕ್ರಮವಿಲ್ಲ ಎಂದು ಈಗಲೇ ಹೇಳಲಾಗದು: ಕೃಷ್ಣಾ ಮೇಲ್ದಂಡೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸರ್ಕಾರದ ಅಂದಾಜು ಸಮಿತಿ ಮತ್ತು ಮಹಾಲೇಖಪಾಲರು ವರದಿಯಲ್ಲಿ ತಿಳಿಸಿದ್ದಾರೆ ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಆದರೆ ಅವ್ಯವಹಾರ ನಡೆದಿದೆಯೋ ಅಥವಾ ಇಲ್ಲವೋ ಎಂಬುದು ತನಿಖೆ ನಂತರ ಮಾತ್ರ ಗೊತ್ತಾಗಲಿದೆ. ತನಿಖೆಗೂ ಮೊದಲೇ ಅವ್ಯವಹಾರ ನಡೆದಿಲ್ಲ ಎಂಬುದನ್ನು ಒಪ್ಪುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಹಿಂದಿನ ಡಿಜಿಪಿಯನ್ನೇ ಕೇಳಬೇಕು:
ಪ್ರಕರಣದ ಬಗ್ಗೆ ತನಿಖೆ ನಡೆಸುವ ತೀರ್ಮಾನ ಕೈಗೊಂಡಿದ್ದು ಸರ್ಕಾರ. ತನಿಖೆ ನಡೆಸಿ ಎಂದು ಸರ್ಕಾರ ಹತ್ತು ತಿಂಗಳ ಹಿಂದೆಯೇ ಅಂದಿನ ಸಿಐಡಿ ಡಿಜಿಪಿಯಾಗಿದ್ದ ಡಾ. ಡಿ.ವಿ. ಗುರುಪ್ರಸಾದ್ ಅವರಿಗೆ ಪತ್ರ ಬರೆದಿತ್ತು. ಆದರೆ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಲು ಕ್ರಮ ಕೈಗೊಳ್ಳಲಿಲ್ಲ. ನಾನು ಸಿಐಡಿಗೆ ಬಂದ ನಂತರ ಪ್ರಕರಣ ದಾಖಲಿಸಿ ಕರ್ತವ್ಯ ನಿರ್ವಹಿಸಿದ್ದೇನೆ. ಈ ಬಗ್ಗೆ ಕಾನೂನು ತಜ್ಞರ ಸಲಹೆಯನ್ನೂ ಪಡೆಯಲಾಗಿದೆ. ಹಿಂದಿನವರು ಏಕೆ ಪ್ರಕರಣ ದಾಖಲಿಸಲಿಲ್ಲ ಎಂಬುದನ್ನು ಹಿಂದಿನ ಡಿಜಿಪಿಯನ್ನೇ ಕೇಳಬೇಕು ಎಂದರು.

ಆರೋಪ ಸುಳ್ಳು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾತು ಕೇಳಿ ಮತ್ತು ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ- ಐಜಿಪಿ) ಆಗುವ ಆಸೆಯಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದೇನೆ ಎಂಬ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಸುಳ್ಳು ಮತ್ತು ದುರುದ್ದೇಶಪೂರಿತ ಎಂದು  ಬಿದರಿ ಆರೋಪಿಸಿದರು.

ದಾಖಲೆ ಸಂಗ್ರಹಿಸಲು ತಂಡ!
`ನನ್ನ ಸೇವಾ ಅವಧಿಯ ದಾಖಲೆ ಸಂಗ್ರಹಿಸಲು ಹತ್ತು ಮಂದಿಯ ತಂಡವನ್ನು ದೇವೇಗೌಡರು ರಚಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ವಿಶೇಷವಾಗಿ ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಆಗಿರುವ ತಪ್ಪುಗಳನ್ನು ಹೊರತೆಗೆಯುವ ಜವಾಬ್ದಾರಿಯನ್ನು ತಂಡಕ್ಕೆ ನೀಡಲಾಗಿದೆ ಎಂದೂ ಗೊತ್ತಾಗಿದೆ.
 
ನನಗೆ ಸಿಕ್ಕಿರುವ ಮಾಹಿತಿ ನಿಜವೇ ಆಗಿದ್ದರೆ ಅದನ್ನು ನಾನು ಸ್ವಾಗತಿಸುತ್ತೇನೆ. ನನ್ನ ಸೇವಾ ಅವಧಿಯ ಎಲ್ಲ ದಾಖಲೆಗಳನ್ನು ಅವರು ಪರಿಶೀಲನೆ ನಡೆಸಲಿ ಚಿಂತೆಯಿಲ್ಲ~ ಎಂದು ಬಿದರಿ ಹೇಳಿದರು. `ಅವರು ಈ ರೀತಿ ಟೀಕೆ ಮತ್ತು ಸುಳ್ಳು ಆರೋಪ ಮಾಡುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಯಾರೇ ನನ್ನ ವಿರುದ್ಧ ಟೀಕೆ ಮಾಡಿದರೂ ಪರವಾಗಿಲ್ಲ. ಆದರೆ ಯಾರ ಬಗ್ಗೆಯೂ ನಾನು ದ್ವೇಷ ಸಾಧಿಸುವುದಿಲ್ಲ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕೆಲವು ನಿರ್ಬಂಧಗಳಿವೆ. ಆ ಪರಿಮಿತಿಯ ಒಳಗೇ ನಾನು ಕೆಲವು ಸ್ಪಷ್ಟನೆ ನೀಡಿದ್ದೇನೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.