ADVERTISEMENT

ಲೋಕಾಯುಕ್ತ ಆರೋಗ್ಯದಲ್ಲಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST

ಬೆಂಗಳೂರು: ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಮಲ್ಯ ಆಸ್ಪತ್ರೆಯ ಆರು ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

‘ಅವರನ್ನು ಮಧ್ಯಾಹ್ನ 2.15ಕ್ಕೆ ಆಸ್ಪತ್ರೆಗೆ ಕರೆತಂದಿದ್ದರು. ತಕ್ಷಣ ಚಿಕಿತ್ಸೆ ಆರಂಭಿಸಿದೆವು. ಸತತ ನಾಲ್ಕು ಗಂಟೆಗಳು ಶಸ್ತ್ರ ಚಿಕಿತ್ಸೆ ನಡೆಸಿದೆವು. ಇನ್ನೂ 2-3 ದಿನ ತೀವ್ರ ನಿಗಾ ಘಟಕದಲ್ಲೇ ಇರಬೇಕಾಗುತ್ತದೆ’ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ದಿವಾಕರ ಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖದ ಮೇಲೆ ಎರಡು ಸಣ್ಣ ಗಾಯಗಳಿವೆ. ಕೃತ್ಯ ನಡೆದ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದರಿಂದ ಮತ್ತು ನಾವು ಕೂಡ ತಡ ಮಾಡದೆ ಶಸ್ತ್ರ ಚಿಕಿತ್ಸೆ ನಡೆಸಿದ್ದರಿಂದ ಬದುಕಿಸಿಕೊಳ್ಳಲು ಸಾಧ್ಯವಾಯಿತು’ ಎಂದರು.

ADVERTISEMENT

‘13 ವರ್ಷಗಳ ಹಿಂದೆ ಅವರು ಬೈಪಾಸ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅವರು ‘ಬ್ಲಡ್‌ ಥಿನ್ನರ್‌’ ಔಷಧ ಸೇವಿಸುತ್ತಿರುವುದರಿಂದ ತಕ್ಷಣವೇ ರಕ್ತಸ್ರಾವ ನಿಲ್ಲಿಸುವುದು ಕಷ್ಟವಾಯಿತು. ಜತೆಗೆ ಮಧುಮೇಹ ಕೂಡ ಇದೆ. ಶಸ್ತ್ರಚಿಕಿತ್ಸೆ ನಡೆಸುವುದು ನಮಗೂ ಸವಾಲಾಗಿತ್ತು. ಅವರನ್ನು ತೀವ್ರ ನಿಗಾ ಕೊಠಡಿಗೆ ಸ್ಥಳಾಂತರಿಸಲಾಯಿತು’ ಎಂದರು. ಪುತ್ರ ಡಾ.ರವೀಂದ್ರ ಶೆಟ್ಟಿ ಜತೆ ಮಾತನಾಡಿದ ಅವರು, ‘ಆರಾಮಾಗಿದ್ದೇನೆ, ಧೈರ್ಯವಾಗಿರಿ’ ಎಂದು ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.