ADVERTISEMENT

ವಂಚಿಸಿದ ಪ್ರಿಯಕರನಿಗೆ ರೂ 7 ಲಕ್ಷ `ದಂಡ~

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2012, 8:06 IST
Last Updated 30 ನವೆಂಬರ್ 2012, 8:06 IST

ಬೆಂಗಳೂರು: `ಒಂದು ಹೆಣ್ಣಿನ ಜೀವನ ಹಾಳು ಮಾಡಿರುವ ನೀನು ಅತ್ಯಂತ ನೀಚ ಮನುಷ್ಯ. ಆಕೆಯ ವಿರುದ್ಧ ಒಂದೇ ಒಂದು ಕೆಟ್ಟ ಮಾತು ಆಡಿದರೆ ಐದು ವರ್ಷ ಜೈಲಿಗೆ ಕಳುಹಿಸಬೇಕಾಗುತ್ತದೆ...~ - ಪ್ರೀತಿಸಿ, ವಿವಾಹ ಆಗುವ ಭರವಸೆ ನೀಡಿ, ಹುಡುಗಿಯ ಜೊತೆ ದೈಹಿಕ ಸಂಪರ್ಕ ಹೊಂದಿ, ನಂತರ ಆಕೆಗೆ ಕೈಕೊಟ್ಟ ಬೆಂಗಳೂರಿನ ಆನಂದ್ ಎಂಬುವವರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಗುರುವಾರ ಮೌಖಿಕವಾಗಿ ನೀಡಿದ ಕಟು ಎಚ್ಚರಿಕೆ ಇದು.

ಕಾಲೇಜಿನಲ್ಲಿ ಓದುವ ಸಂದರ್ಭದಲ್ಲಿ ಅಂಜಲಿ (ಹೆಸರು ಬದಲಾಯಿಸಲಾಗಿದೆ) ಎಂಬ ಹುಡುಗಿಯನ್ನು ಪ್ರೀತಿಸಿ, ಆಕೆಯನ್ನು ವಿವಾಹವಾಗುವುದಾಗಿ ಆನಂದ್ ಭರವಸೆ ನೀಡಿದರು. ಅಂಜಲಿಯನ್ನು ಲೈಂಗಿಕ ಸುಖ ಪಡೆಯಲು ಬಳಸಿಕೊಂಡರು. ನಂತರ ಇನ್ನೊಬ್ಬಳನ್ನು ಮದುವೆಯಾಗಲು ಮುಂದಾದರು. ಇದನ್ನು ತಿಳಿದ ಅಂಜಲಿ, ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳಕ್ಕೇ ನಡೆದರು.

ಅಲ್ಲಿಗೆ ಹೋಗುವ ಮೊದಲೇ ಅಂಜಲಿ, ನಂದಿನಿ ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಆನಂದ್ ವಿರುದ್ಧ ದೂರು ದಾಖಲಿಸಿದರು. ಅಂಜಲಿಯ ಮೇಲೆ ಮದುವೆ ಮನೆಯಲ್ಲೇ ಹಲ್ಲೆ ನಡೆಸಲಾಯಿತು. ಕೆಲವು ದಿನಗಳ ನಂತರ ಆನಂದ್ ಅವರನ್ನು ಪೊಲೀಸರು ಬಂಧಿಸಿದರು. ಆಮೇಲೆ ಅವರು ಜಾಮೀನಿನ ಮೇಲೆ ಬಿಡುಗಡೆ ಆದರು.

ADVERTISEMENT

ಪೊಲೀಸರು ತನ್ನ ಸಹಾಯಕ್ಕೆ ಬರಲಿಲ್ಲ ಎಂದು ಅಂಜಲಿ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ (ಕೆಎಸ್‌ಎಚ್‌ಆರ್‌ಸಿ) ದೂರು ಸಲ್ಲಿಸಿದರು. ದೂರಿನ ವಿಚಾರಣೆ ನಡೆಸಿದ ಕೆಎಸ್‌ಎಚ್‌ಆರ್‌ಸಿ, ಅಂಜಲಿ ಅವರಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿತು.

ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದ ಪೊಲೀಸರು, ಹೈಕೋರ್ಟ್ ಮೆಟ್ಟಿಲೇರಿದರು.
ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.

ಗುರುವಾರ ನಡೆದ ವಿಚಾರಣೆ ವೇಳೆ, ನ್ಯಾಯಪೀಠ ಅಂಜಲಿ ಮತ್ತು ಆನಂದ್ ಅವರನ್ನು ಕರೆದು ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿತು. ಇದರ ಅನ್ವಯ ಆನಂದ್ ಅವರು ಅಂಜಲಿ ಅವರಿಗೆ ಪರಿಹಾರ ರೂಪದಲ್ಲಿ ಏಳು ಲಕ್ಷ ರೂಪಾಯಿ ನೀಡಲು ಒಪ್ಪಿದರು. ಪೊಲೀಸರೂ ನಾಲ್ಕು ಲಕ್ಷ ರೂಪಾಯಿ ನೀಡಲು ಒಪ್ಪಿದರು.

ಅರ್ಜಿದಾರರು ಹಾಗೂ ಪ್ರತಿವಾದಿಗಳ ನಡುವೆ ಆದ ಈ ಒಪ್ಪಂದವನ್ನು ಒಪ್ಪಿದ ನ್ಯಾಯಪೀಠ ಪ್ರಕರಣವನ್ನು ಇತ್ಯರ್ಥಗೊಳಿಸಿತು. ಪರಿಹಾರ ರೂಪದಲ್ಲಿ ದೊರೆಯುವ ಮೊತ್ತವನ್ನು ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವಂತೆ ಅಂಜಲಿ ಅವರಿಗೆ ಕಿವಿಮಾತು ಹೇಳಿತು. ಅದಕ್ಕೂ ಮುನ್ನ ಆನಂದ್ ಅವರನ್ನು ಕರೆಸಿದ ನ್ಯಾಯಪೀಠ ಅವರ ಬೆವರಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.