ADVERTISEMENT

ವಕೀಲರ ಪರಿಷತ್ ಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ಬೆಂಗಳೂರು: ರಾಜ್ಯ ವಕೀಲರ ಪರಿಷತ್‌ನ 25 ಸದಸ್ಯ ಸ್ಥಾನಗಳಿಗೆ ಮಂಗಳವಾರ (ಮಾರ್ಚ್ 27) ಚುನಾವಣೆ ನಡೆಯಲಿದೆ.

ರಾಜ್ಯದಾದ್ಯಂತ 280 ಮತದಾನ ಕೇಂದ್ರಗಳಲ್ಲಿ ಒಟ್ಟು 43,886 ವೃತ್ತಿನಿರತ ವಕೀಲರು ಮತ ಚಲಾಯಿಸಲಿದ್ದಾರೆ. ಸ್ಥಳೀಯ ವಕೀಲರ ಸಂಘಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರಗೆ ಮತದಾನ ನಡೆಯಲಿದೆ. ಚುನಾವಣಾ ಕಣದಲ್ಲಿ 99 ಅಭ್ಯರ್ಥಿಗಳಿದ್ದಾರೆ.

‘ಬೆಂಗಳೂರು ನಗರದ 12 ಸಾವಿರ ಮತದಾರರು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ನಗರದ ಸಿಟಿ ಸಿವಿಲ್ ಕೋರ್ಟ್‌ ಆವರಣದ ವಾಹನಗಳ ಪಾರ್ಕಿಂಗ್‌ ಸ್ಥಳದಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ’ ಎಂದು ಹಿರಿಯ ವಕೀಲ ಜಯಕುಮಾರ್ ಎಸ್‌.ಪಾಟೀಲ ವಿವರಿಸಿದರು.

ADVERTISEMENT

‘ರಾಜ್ಯದ ವಕೀಲರ ಪರಿಷತ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರುವ ವಕೀಲರ ಸಂಖ್ಯೆ 88 ಸಾವಿರಕ್ಕೂ ಹೆಚ್ಚಿದೆ. ಇವರಲ್ಲಿ ವಕೀಲಿ ವೃತ್ತಿ ನಡೆಸುವುದಕ್ಕಾಗಿ (ಸರ್ಟಿಫಿಕೇಷನ್‌ ಆಫ್‌ ಪ್ರ್ಯಾಕ್ಟೀಸ್–ಸಿಒಪಿ) ರಾಜ್ಯ ವಕೀಲರ ಪರಿಷತ್‌ನಿಂದ ವೃತ್ತಿನಿರತ ದೃಢೀಕರಣ ಪತ್ರ ಸಲ್ಲಿಸಿದ ವಕೀಲರಿಗೆ ಮಾತ್ರವೇ ಮತದಾನದ ಹಕ್ಕು ನೀಡಲಾಗಿದೆ’ ಎಂದರು.

‘ಪ್ರತಿ ಜಿಲ್ಲೆಗೆ ಒಬ್ಬ ಚುನಾವಣಾ ವೀಕ್ಷಕರನ್ನು ನೇಮಿಸಲಾಗಿದೆ. ಮತ ಎಣಿಕೆಗೆ ಒಂದು ತಿಂಗಳ ಕಾಲ ಹಿಡಿಯಬಹುದು. ಪಾರದರ್ಶಕ ಪ್ರಕ್ರಿಯೆ ಮೂಲಕ ಬೆಂಗಳೂರಿನಲ್ಲೇ ಮತ ಎಣಿಕೆ ನಡೆಸಲಾಗುವುದು’ ಎಂದು ಪಾಟೀಲ ತಿಳಿಸಿದರು.

ವಂಚಿತರು!: ‘2015ರಲ್ಲಿ ಸಿಒಪಿ ಜಾರಿಗೆ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಬಹುತೇಕ ರಾಜಕಾರಣಿಗಳು ತಮ್ಮ ಮತ ಚಲಾವಣೆಯ ಹಕ್ಕಿನಿಂದ ವಂಚಿತರಾಗಿದ್ದಾರೆ’ ಎನ್ನುತ್ತಾರೆ ವಕೀಲ ಎಸ್.ಎಸ್‌.ಮಿಟ್ಟಲಕೋಡ.

ಈ ಚುನಾವಣೆಯ ಫಲಿತಾಂಶ ಸುಪ್ರೀಂ ಕೋರ್ಟ್‌ನಲ್ಲಿರುವ ಸಿಒಪಿ ಪ್ರಶ್ನಿಸಿದ ಅರ್ಜಿ ವಿಚಾರಣೆಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.