ADVERTISEMENT

ವಕೀಲರ ವಿರುದ್ಧ ಪಿಐಎಲ್ ದಾಖಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಬೆಂಗಳೂರು: ಇದೇ ತಿಂಗಳ 2ರಂದು ನಗರ ಸಿವಿಲ್ ಕೋರ್ಟ್ ಆವರಣದಲ್ಲಿ ಮಾಧ್ಯಮ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಕೀಲರ ವಿರುದ್ಧ ಸೂಕ್ತ ಕ್ರಮಕ್ಕೆ ರಾಜ್ಯ ವಕೀಲರ ಪರಿಷತ್ತಿಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಚೆನ್ನೈ ಮೂಲದ ವಿಶ್ವನಾಥ ಸ್ವಾಮಿ ಎನ್ನುವವರು ಈ ಅರ್ಜಿ ಸಲ್ಲಿಸಿದ್ದಾರೆ. ತಪ್ಪಿತಸ್ಥ ವಕೀಲರ ವಿರುದ್ಧ ಇದುವರೆಗೆ ಪರಿಷತ್ತು ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಮಾಧ್ಯಮ ಹಾಗೂ ಪೊಲೀಸರ ವಿರುದ್ಧ ವಕೀಲರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮಹಾಪೂರವನ್ನೇ ಹರಿಸಿರುವ ಬೆನ್ನಲ್ಲೇ ಈಗ ವಕೀಲರ ವಿರುದ್ಧ ಮೊದಲ ಅರ್ಜಿ ಕೋರ್ಟ್ ಬಾಗಿಲಿಗೆ ಬಂದಿದೆ.

ADVERTISEMENT

ನ್ಯಾಯಾಲಯಗಳಲ್ಲಿ ವಕೀಲರು ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರು 23 ಪುಟಗಳ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅದನ್ನು ಪಾಲಿಸುವಂತೆ ವಕೀಲರಿಗೆ ಆದೇಶಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಚೆನ್ನೈನಲ್ಲಿ ಇರುವ ಕನ್ನಡಿಗರಾಗಿರುವ ತಾವು ಕರ್ನಾಟಕದ ವಕೀಲರ ವಿರುದ್ಧ ಅರ್ಜಿ ಸಲ್ಲಿಸಲು ಕಾರಣ ಏನೆಂದು ಉಲ್ಲೇಖಿಸಿರುವ ಅವರು, `ಚೆನ್ನೈನಲ್ಲಿ ಮೂರು ವರ್ಷಗಳ ಹಿಂದೆ ಇದೇ ರೀತಿ ಘಟನೆ ನಡೆದಿತ್ತು. ಪೊಲೀಸರ ಹಾಗೂ ವಕೀಲರ ನಡುವೆ ಜಟಾಪಟಿಯಾಗಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲಿ ಇದ್ದ ನನ್ನ ಕೈಯನ್ನು ವಕೀಲರು ಮುರಿದಿದ್ದರು. ಇದೇ ಪರಿಸ್ಥಿತಿ ಬೇರೆಯವರಿಗೂ ಆಗಬಹುದು. ಈ ಬಗ್ಗೆ ಸುಪ್ರೀಂಕೋರ್ಟ್ ಗಮನ ಸೆಳೆದಿರುವ ನಾನು ಅಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ. ಅದೇ ರೀತಿ ಕರ್ನಾಟಕದಲ್ಲಿ ಘಟನೆ ನಡೆದಿರುವ ಕಾರಣ, ಈ ಅರ್ಜಿ ಸಲ್ಲಿಸಿದ್ದೇನೆ ವಿನಾ ಇದರಲ್ಲಿ ಸ್ವಹಿತಾಸಕ್ತಿ ಏನೂ ಇಲ್ಲ~ ಎಂದಿದ್ದಾರೆ.

ಈ ಅರ್ಜಿಯ ವಿಚಾರಣೆಯನ್ನು ಶೀಘ್ರದಲ್ಲಿ ನಡೆಸುವಂತೆ ಕೋರಿ ಅವರು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ಮನವಿ ಸಲ್ಲಿಸಿದರು. ಅರ್ಜಿಯನ್ನು ಬರುವ ಸೋಮವಾರ (ಮಾರ್ಚ್ 19) ಕೈಗೆತ್ತಿಕೊಳ್ಳುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.

ಖುದ್ದು ವಾದ: ಈ ಅರ್ಜಿ ವಕೀಲರ ವಿರುದ್ಧವಾಗಿ ಇರುವ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಾದಿಸಲು ಯಾವೊಬ್ಬ ವಕೀಲರೂ ಮುಂದೆ ಬಂದಿಲ್ಲ. ಆದುದರಿಂದ ತಾವೇ ಖುದ್ದಾಗಿ ವಾದ ಮಂಡಿಸುವುದಾಗಿ ವಿಶ್ವನಾಥ್ ತಿಳಿಸಿದ್ದಾರೆ.

ಭಯದ ವಾತಾವರಣ: ಈ ಮಧ್ಯೆ, ಹೈಕೋರ್ಟ್‌ನಲ್ಲಿ ಆತಂಕದ ಸ್ಥಿತಿ ಇನ್ನೂ ಮುಂದುವರಿದಿದೆ. ವಕೀಲರು ನ್ಯಾಯಾಂಗ ಕಲಾಪ  ಬಹಿಷ್ಕಾರ ಮುಂದುವರಿಸಿರುವ ಹಿನ್ನೆಲೆಯಲ್ಲಿ, ಸಿವಿಲ್ ಕೋರ್ಟ್‌ನಲ್ಲಿ ಕಲಾಪ ಮಂಗಳವಾರವೂ ನಡೆದಿಲ್ಲ. ಹೈಕೋರ್ಟ್‌ನಲ್ಲಿ ಕೂಡ ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬ ಕಾರಣದಿಂದ ವಕೀಲರಿಗಿಂತ ಪೊಲೀಸರೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಸಿವಿಲ್ ಕೋರ್ಟ್‌ನ ಹಲವು ವಕೀಲರು ಹೈಕೋರ್ಟ್ ಕಲಾಪ ಬಹಿಷ್ಕಾರಕ್ಕೆ ಮಂಗಳವಾರ ಮಧ್ಯಾಹ್ನ ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಇನ್ನಷ್ಟು ಬಿಗಿಗೊಳಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಕೀಲರು ಹೈಕೋರ್ಟ್‌ಗೆ ಬರುವುದನ್ನು ರದ್ದುಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.