ADVERTISEMENT

ವಯೋಮಿತಿ ಮೀರಿದವರಿಗೂ ಉದ್ಯೋಗ!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಸಚೇತಕ ಅಶೋಕ ಎಂ.ಪಟ್ಟಣ ಅವರ ಕಚೇರಿ ಆಪ್ತ ಸಹಾಯಕಿ ಡಿ.ಕೆ.ಸುಜಾತ ಅವರನ್ನು ವಯೋಮಿತಿ ಮೀರಿದ್ದರೂ ಬೆರಳಚ್ಚುಗಾರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ!

ಅಶೋಕ್‌ ಪಟ್ಟಣರ ಶಿಫಾರಸಿನ ಮೇಲೆ ಈ ನೇಮಕ ಮಾಡಲಾಗಿದೆ. ಶಿಫಾರಸು ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅಭ್ಯರ್ಥಿಗೆ ವಯೋಮಿತಿ ಮೀರಿರುವ ಕಾರಣ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರನ್ನು ಒಳಗೊಂಡ ‘ವಿಶೇಷ ಮಂಡಳಿ’ಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಒಪ್ಪಿಗೆ ಪಡೆಯಲಾಗಿದೆ.

‘ಸುಜಾತಾ ನನ್ನ ಆಪ್ತ ಸಿಬ್ಬಂದಿ ಶಾಖೆಯಲ್ಲಿ ಎಂಟು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆ ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಪಾರ್ಲಿಮೆಂಟರಿ ಫಂಕ್ಷನರೀಸ್‌ ಆಪ್ತ ಸಿಬ್ಬಂದಿ ಶಾಖೆಯಲ್ಲಿ ಸೇವೆ ಸಲ್ಲಿಸುವವರನ್ನು ನೇರ ನೇಮಕಾತಿ ಮಾಡಿಕೊಳ್ಳಬಹುದು’ ಎಂದು ಕೋಳಿವಾಡ ಅವರಿಗೆ ಅಶೋಕ್‌ ಪಟ್ಟಣ ಫೆಬ್ರುವರಿ 1 ರಂದು ಪತ್ರ ಬರೆದಿದ್ದಾರೆ.

ADVERTISEMENT

ತಮ್ಮ ಮನವಿಗೆ ಪೂರಕವಾಗಿ ಹಿಂದಿನ ಸ್ಪೀಕರ್‌ಗಳ ಅವಧಿಯಲ್ಲಿ ಆಗಿದ್ದ ನೇರ ನೇಮಕಾತಿಗಳ ಪ್ರಕರಣಗಳನ್ನು ಅಶೋಕ್‌ ಪಟ್ಟಣ ಶಿಫಾರಸು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 1998ರಲ್ಲಿ ಸ್ಪೀಕರ್ ಆಗಿದ್ದಾಗ, ಅವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಕುಮಟಾ ಅವರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಡಿ.ಬಿ. ಕಲ್ಮಣ್‌ಕರ್‌ ಸಭಾಪತಿ ಆಗಿದ್ದಾಗ 49 ವರ್ಷದ ವಾಮನರಾವ್‌  ಕಾಳೆ ಅವರನ್ನು ಕಿರಿಯ ಸಹಾಯಕರಾಗಿ ನೇಮಿಸಲಾಗಿದೆ ಎಂದಿದ್ದಾರೆ.

1999ರಲ್ಲಿ ಮಲ್ಲಿಕಾರ್ಜುನ ಖರ್ಗೆ ಆಪ್ತ ಸಿಬ್ಬಂದಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್‌ ಮತ್ತು ಮೋಹನ್‌ ಅವರನ್ನು ಗ್ರೂಪ್‌ ಡಿ ಹುದ್ದೆಗಳಿಗೆ, ಎಂ.ವಿ.ವೆಂಕಟಪ್ಪ ಸ್ಪೀಕರ್‌ ಆಗಿದ್ದಾಗ ಅನಿತಾ ಮತ್ತು ಸಂಜೀವರೆಡ್ಡಿ ಅವರನ್ನು ಕಂಪ್ಯೂಟರ್‌ ಆಪರೇಟರ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಜಗದೀಶ ಶೆಟ್ಟರ್‌ ಸ್ಪೀಕರ್‌ ಆಗಿದ್ದಾಗ ನಾಗಭೂಷಣ್‌ ಮತ್ತು ಅಮೀನಪ್ಪ ಅಡವಿ ಅವರನ್ನು ಕ್ರಮವಾಗಿ ಕಿರಿಯ ಸಹಾಯಕ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ನೇಮಿಸಿಕೊಳ್ಳಲಾಯಿತು.

2005– 06 ರಲ್ಲಿ ಎಚ್‌.ಕೆ.ಪಾಟೀಲ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕರಾಗಿದ್ದಾಗ, ಅವರ ಸಹಾಯಕರಾಗಿದ್ದ ರಾಜನಾಥ ಪುರೋಹಿತರನ್ನು ಕಿರಿಯ ಸಹಾಯಕರನ್ನಾಗಿ, ರವೀಂದ್ರ ಬಟ್ಟೂರು ಮತ್ತು ಮೊಹಮ್ಮದ್‌ ಗೌಸ್‌ ಅವರನ್ನು ಸ್ವೀಪರ್‌ಗಳಾಗಿ ನೇಮಕ ಮಾಡಲಾಗಿತ್ತು. ಆದ್ದರಿಂದ, ಸುಜಾತ ಸರ್ಕಾರಿ ಸೇವೆಗೆ ನಿಗದಿ ಮಾಡಿರುವ ಗರಿಷ್ಠ ವಯೋಮಿತಿ ಮೀರುವ ಹಂತದಲ್ಲಿರುವುದರಿಂದ   ನೇರ ನೇಮಕಾತಿ ಮಾಡಬೇಕು ಎಂದು ಪಟ್ಟಣ ಪತ್ರದಲ್ಲಿ ವಿವರಿಸಿದ್ದಾರೆ.

‘ನಿಯಮಾವಳಿ ಸಡಿಲಗೊಳಿಸಿ ನೇಮಕಾತಿ ಮಾಡಿಕೊಳ್ಳಲು ನಿಯಮದಲ್ಲಿ ಅವಕಾಶ ಇರುವುದರಿಂದ  ‘ವಿಶೇಷ ಮಂಡಳಿ’ಯ ಅನುಮತಿ ಪಡೆಯಲಾಗಿದೆ. ಆದ್ದರಿಂದ ಮಾನವೀಯತೆ ನೆಲೆಯಲ್ಲಿ ಬೆರಳಚ್ಚುಗಾರ ಹುದ್ದೆಗೆ ನೇರ ನೇಮಕಾತಿ ಮಾಡಲಾಗಿದೆ’ ಎಂದು ಹೆಚ್ಚುವರಿ ಕಾರ್ಯದರ್ಶಿ ಎಚ್‌.ಎಸ್‌. ಕಸ್ತೂರಿ ತಿಳಿಸಿದ್ದಾರೆ.

‘ನೇಮಕಾತಿ ನಿಯಮಾವಳಿಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿ ಬೇಕಾದವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ಅರ್ಹ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸುವ ಕೆಲಸ ನಡೆದಿದೆ’ ಎಂದು ಸಚಿವಾಲಯದ ನೌಕರಿಗೆ ಅರ್ಜಿ ಸಲ್ಲಿಸಿದ ಪವನ್‌ ಕುಮಾರ್‌ ಎಂಬುವರು ‘ಪ್ರಜಾವಾಣಿ’ ಬಳಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.