ADVERTISEMENT

ವರದಿ ಅಂಗೀಕರಿಸಲು ಲಿಂಗಾಯತ ಸ್ವಾಮೀಜಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:37 IST
Last Updated 15 ಮಾರ್ಚ್ 2018, 19:37 IST

ಧಾರವಾಡ: ‘ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಸಮಿತಿ ನೀಡಿರುವ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಬೇಕು. ಜತೆಗೆ ಕೇಂದ್ರಕ್ಕೂ ಅದನ್ನು ಶಿಫಾರಸು ಮಾಡಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಇಲ್ಲಿ ಒತ್ತಾಯಿಸಿದರು.

‘ಸ್ವತಂತ್ರ ಧರ್ಮಕ್ಕೆ ಬೇಕಾಗುವ ಎಲ್ಲ ದಾಖಲೆಗಳೂ ಇವೆ. ಹೀಗಾಗಿ ವರದಿಯನ್ನು ಯಥಾವತ್‌ ಅಂಗೀಕರಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಪಂಚಾಚಾರ್ಯರು ಮೊದಲಿನಿಂದಲೂ ವಿಘ್ನಸಂತೋಷಿಗಳು ಹಾಗೂ ಹೈಜಾ‌ಕ್‌ ಪ್ರವೃತ್ತಿ ಉಳ್ಳವರು. ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಚರಿತ್ರೆ ಕುರಿತು ಜನರಿಗೆ ಸದಾ ಸುಳ್ಳು ಮಾಹಿತಿ ನೀಡಿಕೊಂಡೇ ಬಂದಿದ್ದಾರೆ. ವರದಿ ಅಂಗೀಕರಿಸದಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವ ಕಾಶಿಯ ಚಂದ್ರಶೇಖರ ಶಿವಾಚಾರ್ಯರ ಚರಿತ್ರೆಯೇ ಪ್ರಶ್ನಾರ್ಹವಾಗಿದೆ’ ಎಂದು ಟೀಕಿಸಿದರು.

ADVERTISEMENT

ನಿಜಗುಣಾನಂದ ಸ್ವಾಮೀಜಿ, ಬೆಳಗಾವಿಯ ಡಾ. ಸಿದ್ಧರಾಮ ಸ್ವಾಮೀಜಿ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು.
***
‘ಚಿಮೂ ಪಾಂಡಿತ್ಯಕ್ಕೆ ವ್ಯಥೆ!’
‘ಚಿದಾನಂದ ಮೂರ್ತಿ ಎಂಬ ಇತಿಹಾಸಕಾರರು, ರಾಜ್ಯದಲ್ಲಿ ಒಕ್ಕಲಿಗರ ನಂತರ ಲಿಂಗಾಯತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅವರ ಪಾಂಡಿತ್ಯಕ್ಕೆ ವ್ಯಥೆ ಉಂಟಾಗುತ್ತಿದೆ’ ಎಂದು ಡಾ.ಸಿದ್ಧಲಿಂಗ ಸ್ವಾಮೀಜಿ ವ್ಯಂಗ್ಯವಾಡಿದರು.

‘ಪಂಜಾಬಿನಲ್ಲಿ ಸಿಖ್‌ರು ಬಹುಸಂಖ್ಯಾತರು. ಹೀಗಿದ್ದರೂ, ಅವರು ರಾಷ್ಟ್ರವ್ಯಾಪಿಯಲ್ಲಿ ಅಲ್ಪಸಂಖ್ಯಾತರು. ಹಾಗೆಯೇ ಲಿಂಗಾಯತರು. ಹೀಗಾಗಿ, ಲಿಂಗಾಯತ ಧರ್ಮಕ್ಕೂ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.