ನವದೆಹಲಿ: ಭ್ರಷ್ಟಾಚಾರ ಆರೋಪದಿಂದ ಹೊರಬಂದಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಕ ಮಾಡಬೇಕೆಂಬ ಒತ್ತಡ ಹೆಚ್ಚುತ್ತಿದೆ. ಮಾಜಿ ಮುಖ್ಯಮಂತ್ರಿಗೆ ನಿಷ್ಠರಾಗಿರುವ ಸಂಸದರು ದೆಹಲಿಯಲ್ಲಿ ತೀವ್ರ `ಲಾಬಿ~ ಮಾಡುತ್ತಿದ್ದು, ಸದ್ಯದ ಬಿಕ್ಕಟ್ಟಿಗೆ ಸೂಕ್ತವಾದ ಪರಿಹಾರ ಕಂಡುಹಿಡಿಯಲಿದ್ದು, ಅಲ್ಲಿವರೆಗೆ ತಾಳ್ಮೆಯಿಂದ ಕಾಯುವಂತೆ ವರಿಷ್ಠರು ಕಿವಿಮಾತು ಹೇಳಿದ್ದಾರೆ.
`ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮುಂಬೈಗೆ ಹೋಗಿದ್ದಾರೆ. ಅವರು ರಾಜಧಾನಿಗೆ ವಾಪಸ್ ಬಂದ ತಕ್ಷಣ ವರಿಷ್ಠರು ಸಭೆ ಸೇರಿ ರಾಜ್ಯದ ರಾಜಕೀಯ ಬಿಕ್ಕಟ್ಟು ಕುರಿತು ಚರ್ಚಿಸಿ ಸೂಕ್ತವಾದ ನಿರ್ಧಾರ ಮಾಡಲಿದ್ದಾರೆ. ಅಲ್ಲಿಯವರೆಗೂ ತಾಳ್ಮೆಯಿಂದಿರಿ~ ಎಂದು ಪಕ್ಷದ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಒಳಗೊಂಡಂತೆ ಹಲವು ನಾಯಕರು ಯಡಿಯೂರಪ್ಪ ಬೆಂಬಲಿಗರಿಗೆ ಸಲಹೆ ಮಾಡಿದ್ದಾರೆ.
ಗಡ್ಕರಿ ಮತ್ತು ಜೇಟ್ಲಿ ನೇರವಾಗಿ ಯಡಿಯೂರಪ್ಪನವರ ಜತೆ ದೂರವಾಣಿ ಸಂಪರ್ಕದಲ್ಲಿದ್ದು, ಮನವೊಲಿಕೆಗೆ ಯತ್ನಿಸುತ್ತಿದ್ದಾರೆ. ಆದರೆ, ನಾಯಕತ್ವ ಬದಲಾವಣೆಗೆ ಹಿಡಿದಿರುವ ಪಟ್ಟು ಸಡಿಲಿಸಲು ಮಾಜಿ ಮುಖ್ಯಮಂತ್ರಿ ಒಪ್ಪುತ್ತಿಲ್ಲ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗ ಬಣ ಹೇರುತ್ತಿರುವ ಒತ್ತಡದಿಂದ ಬಿಜೆಪಿ ಹೈಕಮಾಂಡ್ ಇಕ್ಕಟ್ಟಿಗೆ ಸಿಕ್ಕಿದೆ. ರಾಜ್ಯ ಹೈಕೋರ್ಟ್ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ವಿರುದ್ಧದ ದೂರು (ಎಫ್‌ಐಆರ್) ವಜಾ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಪುನಃ ಮುಖ್ಯಮಂತ್ರಿ ಆಗಿ ನೇಮಕ ಮಾಡಬೇಕೆಂದು ಕೆಲವು ಪ್ರಮುಖ ಮುಖಂಡರು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಇದುವರೆಗೆ ಯಡಿಯೂರಪ್ಪ ಅವರನ್ನು ವಿರೋಧಿಸುತ್ತಿದ್ದ ಹಲವು ನಾಯಕರು ತಟಸ್ಥರಾಗಿದ್ದಾರೆ. ಹಿರಿಯ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಮಾತ್ರ ಮಾಮೂಲಿನಂತೆ ಯಡಿಯೂರಪ್ಪ ಅವರನ್ನು ಪುನಃ ಮುಖ್ಯಮಂತ್ರಿ ಮಾಡಬಾರದು ಎಂದು ಹಟ ಹಿಡಿದಿದ್ದಾರೆಂದು ಮೂಲಗಳು ಸ್ಪಷ್ಟಪಡಿಸಿವೆ.
`ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿದೆ. ಈಗ ಯಡಿಯೂರಪ್ಪ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತೆ ನೇಮಿಸಿದರೆ ವಿರೋಧಿಗಳ ಟೀಕೆಗಳನ್ನು ಎದುರಿಸುವುದು ಹೇಗೆ? ಪ್ರತಿಷ್ಠಿತ ಗಣಿ ಕಂಪೆನಿಗಳಿಂದ `ದೇಣಿಗೆ~ ಪಡೆದಿರುವ ಆರೋಪ ಕುರಿತು ಪರಿಶೀಲಿಸುತ್ತಿರುವ `ಸಿಇಸಿ~ ಮಾಜಿ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿದರೆ ಏನು ಕಥೆ?~ ಎಂಬ ಹಲವು ಪ್ರಶ್ನೆಗಳು ವರಿಷ್ಠರ ನಡುವೆ ತೀವ್ರವಾಗಿ ಚರ್ಚೆ ಆಗುತ್ತಿದೆ ಎನ್ನಲಾಗಿದೆ.
ಈ ಮಧ್ಯೆ, ಯಡಿಯೂರಪ್ಪ ಅವರಿಗೆ ನಿಷ್ಠರಾದ ಹನ್ನೆರಡು ಸಂಸದರು ಬಿ.ವೈ. ರಾಘವೇಂದ್ರ ಅವರ ಮನೆಯಲ್ಲಿ ಬೆಳಿಗ್ಗೆ ಮತ್ತು ಪ್ರಭಾಕರ ಕೋರೆ ಮನೆಯಲ್ಲಿ ಸಂಜೆ ಸಭೆ ಸೇರಿ ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಿದರು. ಬೆಳಿಗ್ಗೆ 9.30ರ ಸುಮಾರಿಗೆ ಆರಂಭವಾದ ಉಪಹಾರ ಸಭೆ ಮಧ್ಯಾಹ್ನ 1ಕ್ಕೆ ಮುಗಿಯಿತು.
ಈ ಸಭೆಯಲ್ಲಿ `ವರಿಷ್ಠರು ಕೊಟ್ಟ ಮಾತಿನಂತೆ ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಮಾಜಿ ಮುಖ್ಯಮಂತ್ರಿಗಳನ್ನು ಹೈಕೋರ್ಟ್ ಭ್ರಷ್ಟಾಚಾರ ಆರೋಪದಿಂದ ಮುಕ್ತಿಗೊಳಿಸಿದೆ. ತಕ್ಷಣ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದು ಯಡಿಯೂರಪ್ಪ ಅವರಿಗೆ ಪಟ್ಟ ಕಟ್ಟಬೇಕು~ ಎಂದು ಆಗ್ರಹಿಸುವ ಮನವಿ ಪತ್ರ ಸಿದ್ಧಪಡಿಸಿದರು.
ಅಲ್ಲಿಂದ ಸಂಸತ್ ಭವನಕ್ಕೆ ತೆರಳಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದರು. ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸುರೇಶ್ ಅಂಗಡಿ, ಜಿ.ಎಸ್. ಬಸವರಾಜ್, ಪಿ.ಸಿ. ಮೋಹನ್, ಬಿ.ವೈ. ರಾಘವೇಂದ್ರ, ಆಯನೂರು ಮಂಜುನಾಥ್, ಜನಾರ್ದನ ಸ್ವಾಮಿ, ಶಿವಕುಮಾರ್ ಉದಾಸಿ, ಗದ್ದಿಗೌಡರ್, ರಮೇಶ್ ಕತ್ತಿ ಹಾಗೂ ಪ್ರಭಾಕರ ಕೋರೆ ಮುಂತಾದವರಿದ್ದರು. ಅನಂತರ ಕೆಲವರು ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.