ADVERTISEMENT

ವರ್ಗಾವಣೆ ನಿಂತಿಲ್ಲ!

ಮುಖ್ಯಮಂತ್ರಿ ಮಾತಿಗೂ ಕಿಮ್ಮತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 20:05 IST
Last Updated 7 ಸೆಪ್ಟೆಂಬರ್ 2013, 20:05 IST
ವರ್ಗಾವಣೆ ಅರ್ಜಿ ಸ್ವೀಕರಿಸುವುದಿಲ್ಲ ಎಂದು ವಿಧಾನಸೌಧದಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗಳ ಕಚೇರಿ ಬಾಗಿಲಿಗೆ ಚೀಟಿ ಅಂಟಿಸಿರುವುದು
ವರ್ಗಾವಣೆ ಅರ್ಜಿ ಸ್ವೀಕರಿಸುವುದಿಲ್ಲ ಎಂದು ವಿಧಾನಸೌಧದಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗಳ ಕಚೇರಿ ಬಾಗಿಲಿಗೆ ಚೀಟಿ ಅಂಟಿಸಿರುವುದು   

ಬೆಂಗಳೂರು: ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ನಿಗದಿಪಡಿಸಿದ್ದ ಗಡುವು ಮುಗಿದರೂ ವರ್ಗಾವಣೆ ಆದೇಶ ಹೊರ ಬೀಳುವುದು ಮಾತ್ರ ನಿಂತಿಲ್ಲ. ಪ್ರಮುಖ ಇಲಾಖೆಗಳಾದ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಉನ್ನತ ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಂತುಗಳ ರೂಪದಲ್ಲಿ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗುತ್ತಿದೆ.

ಆಗಸ್ಟ್ 31ರ ಒಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಹೋದ್ಯೋಗಿಗಳಿಗೆ ಸೂಚಿಸಿದ್ದರು. ಅಲ್ಲದೆ ಗಡುವಿನ ನಂತರ ಯಾರಾದರೂ ವರ್ಗಾವಣೆ ಅರ್ಜಿ ಹಿಡಿದು ಬಂದರೆ ಅವರನ್ನು ಅಮಾನತು ಮಾಡುವುದಾಗಿ ಎಚ್ಚರಿಸಿದ್ದರು. ಆದರೆ, ಸೆಪ್ಟೆಂಬರ್ ಮೊದಲ ವಾರ ಕಳೆದರೂ ವರ್ಗಾವಣೆ ಮಾಡುವುದು ನಿಂತಿಲ್ಲ.

ಬಹುತೇಕ ನಿತ್ಯ ಒಂದಲ್ಲ ಒಂದು ಇಲಾಖೆಯಲ್ಲಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಗಡುವು ಮುಗಿದಿರುವುದರಿಂದ ಸಚಿವರಿಗೆ ಈಗ ವರ್ಗಾವಣೆ ಮಾಡುವ ಅಧಿಕಾರ ಇಲ್ಲ. ಆದರೆ, ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಈಗಲೂ ವರ್ಗಾವಣೆ ಮಾಡಲಾಗುತ್ತಿದೆ. ಶಾಸಕರು, ಮಾಜಿ ಶಾಸಕರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರಿಂದ ಈಗಲೂ ವರ್ಗಾವಣೆಯ ಮನವಿ ಪತ್ರಗಳು ಬರುತ್ತಿವೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ವಿಧಾನಸೌಧ, ವಿಕಾಸಸೌಧದಲ್ಲಿ ಇರುವ ಸಚಿವರ ಕಚೇರಿಗಳ ಬಾಗಿಲಿಗೆ `ವರ್ಗಾವಣೆ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ' ಎಂಬ ಚೀಟಿಗಳನ್ನು ಅಂಟಿಸಲಾಗಿದೆ. ಇಷ್ಟಾದರೂ ಶಾಸಕರು, ಪ್ರಭಾವಿಗಳ ಮೂಲಕ ಈಗಲೂ ವರ್ಗಾವಣೆ ಕೋರಿ ಅರ್ಜಿಗಳು ಬರುತ್ತಿವೆ. ಮುಖ್ಯಮಂತ್ರಿಗಳು ಅನುಮೋದನೆ ನೀಡಿದರಷ್ಟೇ ವರ್ಗಾವಣೆ ಮಾಡಲಾಗುತ್ತದೆ. ಇಲ್ಲದಿದ್ದರೆ ಈ ವರ್ಷ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಸೆಪ್ಟೆಂಬರ್ 5ರಂದು ಮೂವರು ಪ್ರಾಂಶುಪಾಲರನ್ನು, ಸೆಪ್ಟೆಂಬರ್ 4ರಂದು 24 ಮಂದಿ ಉಪನ್ಯಾಸಕರು, ಒಬ್ಬ ಪ್ರಥಮ ದರ್ಜೆ ಸಹಾಯಕರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಆರು ಮಂದಿಯ ವರ್ಗಾವಣೆಯಲ್ಲಿ ಮಾರ್ಪಾಡು ಮಾಡಲಾಗಿದೆ.

ಖಜಾನೆ ಇಲಾಖೆಯಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ 150ಕ್ಕೂ ಹೆಚ್ಚು ವರ್ಗಾವಣೆಗಳು ಆಗಿವೆ. ಮುಂದಿನ ವಾರ ಇನ್ನೂ ಕೆಲವು ವರ್ಗಾವಣೆಗಳು ಆಗುವ ಸಾಧ್ಯತೆ ಇದೆ ಎಂದು ಖಜಾನೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಯಲ್ಲಿ 500ಕ್ಕೂ ಹೆಚ್ಚು ಎಂಜಿನಿಯರ್‌ಗಳ ವರ್ಗಾವಣೆ ಆದೇಶವನ್ನು ಮುಂದಿನ ವಾರ ಹೊರಡಿಸಲಾಗುತ್ತದೆ. ಈಗಾಗಲೇ ವರ್ಗಾವಣೆ ಪ್ರಸ್ತಾವನೆಗಳ ಕಡತ ಸಿದ್ಧವಾಗಿದೆ. ಗೌರಿ - ಗಣೇಶ ಹಬ್ಬದ ನಂತರ ವರ್ಗಾವಣೆ ಆದೇಶ ಹೊರ ಬೀಳಬಹುದು ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸಿವೆ.

ಮಧ್ಯವರ್ತಿಗಳ ಹಾವಳಿ: `ಎಂಜಿನಿಯರ್‌ಗಳ ವರ್ಗಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದ ವಹಿವಾಟು ನಡೆಯುತ್ತಿದೆ. ಅಧಿಕಾರಿಗಳ ಕೈಬಿಸಿ ಮಾಡಿದರಷ್ಟೇ ವರ್ಗಾವಣೆ ಆಗುತ್ತದೆ. ಹಣ ನೀಡದಿದ್ದರೆ ಕಡತ ಇದ್ದಲ್ಲೇ ಇರುತ್ತದೆ. ಕೆಲವರಂತೂ ಕಡತ ತಮ್ಮ ಬಳಿ ಬರುತ್ತಿದ್ದಂತೆಯೇ ವರ್ಗಾವಣೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ. ಒಮ್ಮೆ ಬಂದು ಹೋಗಿ ಎನ್ನುತ್ತಾರೆ. ಅವರ ಬಳಿ ಹೋದರೆ ಎಷ್ಟು ಕೊಡುತ್ತೀರಿ ಎಂಬುದಾಗಿ ನೇರವಾಗಿಯೇ ಕೇಳುತ್ತಾರೆ' ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆಯೇ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಶಾಸಕರ ಭವನದಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ. ವರ್ಗಾವಣೆ `ಸೀಸನ್' ಬರುವುದನ್ನೇ ಕಾಯುತ್ತಿರುವ ಮಧ್ಯವರ್ತಿಗಳು, ನೌಕರರ ಶ್ರೇಣಿ ಆಧರಿಸಿ ಇಂತಹ ಹುದ್ದೆಗೆ ಇಂತಿಷ್ಟು ಎಂದು ಹಣ ನಿಗದಿ ಮಾಡುತ್ತಾರೆ. ಅವರು ಹೇಳಿದಷ್ಟು ಹಣ ಹಾಗೂ ಶಾಸಕರ ಶಿಫಾರಸು ಪತ್ರ ನೀಡಿದರೆ ವರ್ಗಾವಣೆ ಮಾಡಿಸಿಕೊಡುತ್ತಾರೆ ಎಂದು ಸಚಿವಾಲಯದ ನೌಕರರೊಬ್ಬರು ತಿಳಿಸಿದರು.

ಬಹುತೇಕ ಸಚಿವರು `ಶಾಸಕರ ಶಿಫಾರಸು ಪತ್ರ ಆಧರಿಸಿ ವರ್ಗಾವಣೆ ಮಾಡಿ' ಎಂದು ಟಿಪ್ಪಣಿ ಬರೆಯುತ್ತಾರೆ. ಆದರೆ, ಕೆಳಹಂತದ ಅಧಿಕಾರಿಗಳು ಹಣ ನಿರೀಕ್ಷೆ ಮಾಡುತ್ತಾರೆ. ಕೇಳಿದಷ್ಟು ಹಣ ನೀಡಿದರೆ ಮಾತ್ರ ವರ್ಗಾವಣೆ ಮಾಡುತ್ತಾರೆ. ಇಲ್ಲದಿದ್ದರೆ ಕಡತವನ್ನು ಹಾಗೆಯೇ ಇಟ್ಟಿರುತ್ತಾರೆ. ಇನ್ನು ಕೆಲವು ಸಚಿವರಂತೂ ಬಂದ ಅರ್ಜಿಗಳನ್ನೆಲ್ಲ ಸ್ವೀಕರಿಸುತ್ತಾರೆ. ಆ ನಂತರ ಯಾರು ಕೈಬಿಸಿ ಮಾಡುತ್ತಾರೊ ಅವರನ್ನು ಮಾತ್ರ ವರ್ಗಾವಣೆ ಮಾಡುತ್ತಾರೆ. ಈ ಕಾರ್ಯಕ್ಕೆ ತಮ್ಮ ನಂಬಿಕಸ್ಥ ಅಧಿಕಾರಿಗಳು ಅಥವಾ ಆಪ್ತ ಸಿಬ್ಬಂದಿಯನ್ನು ನಿಯೋಜಿಸುತ್ತಾರೆ ಎಂದರು.

ಆಯಕಟ್ಟಿನ ಮುಖ್ಯ ಎಂಜಿನಿಯರ್ ಹುದ್ದೆಗೆ ಹೋಗಬೇಕಾದರೆ 3 ರಿಂದ 5 ಕೋಟಿ ರೂಪಾಯಿ ನೀಡಬೇಕು. ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ವರ್ಗಾವಣೆಗೆ ಒಂದು ಕೋಟಿ ರೂಪಾಯಿವರೆಗೂ ಪಡೆಯಲಾಗುತ್ತಿದೆ. ಅಷ್ಟೇ ಅಲ್ಲದೆ ವರ್ಗಾವಣೆ ಮಾಡಿಸಿಕೊಳ್ಳಲು ಹಾಗೂ ವರ್ಗಾವಣೆ ಆಗದಂತೆ ನೋಡಿಕೊಳ್ಳುವುದಕ್ಕೂ ಹಣ ನೀಡಬೇಕು. ವರ್ಗಾವಣೆ ಆಗಿ ಒಂದು ವರ್ಷವೂ ಆಗಿರುವುದಿಲ್ಲ. ಆದರೂ, ಈ ವರ್ಷ ವರ್ಗಾವಣೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಸುಮ್ಮನೆ ಹೆದರಿಸುತ್ತಾರೆ.

ವರ್ಗಾವಣೆಗೆ ಹೆದರಿ, ಅದರಿಂದ ತಪ್ಪಿಸಿಕೊಳ್ಳಲು ಹಣ ನೀಡುವವರೂ ಇದ್ದಾರೆ ಎಂದು ವರ್ಗಾವಣೆಯ ಒಳ ಮರ್ಮ ಬಲ್ಲವರೊಬ್ಬರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.