ರಾಯಚೂರು: ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿಗಳ ವರ್ಧಂತಿ ಉತ್ಸವ ಶನಿವಾರ ನಡೆಯಿತು. ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರ್ಧಂತಿ ಉತ್ಸವ ಅಂಗವಾಗಿ ಬೆಳಿಗ್ಗೆ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ನಡೆದ ಅಭಿಷೇಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿದ್ದರು. ತಿರುಪತಿ ತಿರುಮಲ ದೇವಸ್ಥಾನದಿಂದ ವೆಂಕಟೇಶ್ವರ ಶೇಷವಸ್ತ್ರವನ್ನು ಟಿಟಿಡಿಯ ಪ್ರತಿನಿಧಿಗಳು ಮಂತ್ರಾಲಯ ಮಠಕ್ಕೆ ತಂದು ಅರ್ಪಣೆ ಮಾಡಿದರು.
ಚೆನ್ನೈನ ಸಂಗೀತ ಕಲಾವಿದ ಗಣೇಶನ್ ನೇತೃತ್ವದ ಸಂಗೀತ ಕಲಾವಿದರ ತಂಡವು ‘ನಾದಹಾರಂ’ ಭಕ್ತಿ ಸಂಗೀತ ಸೇವೆ ಸಮರ್ಪಿಸಿದರು. ಏಕಕಾಲದಲ್ಲಿ ನೂರಾರು ಕಲಾವಿದರು ಸಂಗೀತ ಪ್ರಸ್ತುತಪಡಿಸಿದರು.
ನಾದಹಾರಂ ಸಂಗೀತ ಕಲಾವಿದರ ತಂಡವು ಮಂತ್ರಾಲಯ ಮಠಕ್ಕೆ ₨12 ಲಕ್ಷ ಮೊತ್ತದ ಚೆಕ್‌ಅನ್ನು ಅರ್ಪಿಸಿದರು. ಅಲ್ಲದೇ 101 ತಳಿಯ ಗೋವುಗಳನ್ನು ರಾಘವೇಂದ್ರಸ್ವಾಮಿಮಠದ ಗೋಶಾಲೆಗೆ ಸಮರ್ಪಿಸಿದರು.
ಪೀಠಾಧಿಪತಿಗಳು ಮಠವು ಭಕ್ತರ ದೇಣಿಗೆಯಲ್ಲಿ ಕೈಗೊಂಡ ಶಿಲಾಮಂಟಪ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅನಾರೋಗ್ಯದಲ್ಲಿರುವ ಪೀಠಾಧಿಪತಿಗಳು ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಮಠದ ಉತ್ತರಾಧಿ ಕಾರಿ ಸುಬುಧೇಂದ್ರ ಸ್ವಾಮೀಜಿ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.