ADVERTISEMENT

ವಾರ್ಡ್ ಮೀಸಲು ಸುಪ್ರೀಂಗೆ

ಹೆಚ್ಚಿನ ಕಾಲಾವಕಾಶಕ್ಕೆ ರಾಜ್ಯ ಸರ್ಕಾರ ಮೊರೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಬೆಂಗಳೂರು: ಏಳು ಮಹಾನಗರ ಪಾಲಿಕೆಗಳೂ ಸೇರಿದಂತೆ ಇನ್ನೂರಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಣೆಗೆ ಹೆಚ್ಚಿನ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮೀಸಲಾತಿ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ  (ಎಸ್‌ಎಲ್‌ಪಿ) ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈ ವಿಷಯ ಕುರಿತು ಶುಕ್ರವಾರ ನಡೆದ ಸಚಿವ ಸಂಪುಟದ ತುರ್ತು ಸಭೆಯಲ್ಲಿ ಚರ್ಚಿಸಲಾಯಿತು. `ಹೈಕೋರ್ಟ್ ಆದೇಶದಂತೆ ಶುಕ್ರವಾರವೇ ಮೀಸಲಾತಿ ಪಟ್ಟಿ ಪ್ರಕಟಿಸುವುದು ಕಷ್ಟ. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು' ಎಂದು ಕಾನೂನು ಸಚಿವ ಎಸ್.ಸುರೇಶ ಕುಮಾರ್ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

`ಕರಡು ಮೀಸಲಾತಿ ಪಟ್ಟಿಗೆ 2,500 ಆಕ್ಷೇಪಣೆಗಳು ಬಂದಿವೆ. ಅವುಗಳನ್ನು ಇತ್ಯರ್ಥಗೊಳಿಸಿ ಅಂತಿಮ ಪಟ್ಟಿ ಪ್ರಕಟಿಸಲು ಎರಡು ವಾರಗಳ ಸಮಯ ಬೇಕು' ಎಂದು ರಾಜ್ಯ ಸರ್ಕಾರ, ಹೈಕೋರ್ಟ್ ವಿಭಾಗೀಯ ಪೀಠವನ್ನು ಕೋರಿತ್ತು. ಪೀಠ ಅದನ್ನು ಮಾನ್ಯ ಮಾಡಿಲ್ಲ. 2011ರ ಜನಗಣತಿಯ ಅಂಕಿ-ಸಂಖ್ಯೆ ನಿರೀಕ್ಷೆಯಲ್ಲಿ ಇರುವುದಾಗಿಯೂ ಸರ್ಕಾರ ತಿಳಿಸಿತ್ತು. ಇದನ್ನೂ ಹೈಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ' ಎಂದು ಅವರು ಹೇಳಿದರು.

`2001ರ ಜನಗಣತಿ ಪ್ರಕಾರ ಚುನಾವಣೆ ನಡೆಸಿದರೆ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಅನ್ಯಾಯ ಆಗಲಿದೆ. 2011ರ ಜನಗಣತಿ ಪ್ರಕಾರ ಚುನಾವಣೆ ನಡೆಸುವುದರಿಂದ ಈ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ' ಎಂದು ಅವರು ವಿವರಿಸಿದರು.

`2011ರ ಜನಗಣತಿಯ ಅಂಕಿ-ಸಂಖ್ಯೆ ಮಾರ್ಚ್ ವೇಳೆಗೆ ಅಧಿಕೃತವಾಗಿ ಲಭ್ಯವಾಗಲಿದೆ. ಹೊಸ ಜನಗಣತಿ ಪ್ರಕಾರ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಮೂರು ನಗರಸಭೆಗಳಿಗೆ ಮಹಾನಗರ ಪಾಲಿಕೆಯ ಸ್ಥಾನಮಾನ ಸಿಗಲಿದೆ. 40 ಪುರಸಭೆಗಳಿಗೆ ನಗರಸಭೆಯ ಸ್ಥಾನಮಾನ ಸಿಗಲಿದೆ.  ಅನೇಕ ಪಟ್ಟಣ ಪಂಚಾಯಿತಿಗಳು ಪುರಸಭೆ ಸ್ಥಾನಕ್ಕೆ ಮೇಲ್ದರ್ಜೆಗೇರಲಿವೆ. ಹೀಗಾಗಿ ಇತ್ತೀಚಿನ ಜನಗಣತಿ ಪ್ರಕಾರವೇ ಚುನಾವಣೆ ನಡೆಸುವುದು ವಿಹಿತ ಎಂದು ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಎಲ್ಲ ಪಕ್ಷಗಳ ಶಾಸಕರು ಅಭಿಪ್ರಾಯಪಟ್ಟಿದ್ದಾರೆ' ಎಂದು ಸುರೇಶಕುಮಾರ್ ಹೇಳಿದರು.

ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸುವ ಕುರಿತು ರಾಜ್ಯ ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು. ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಕೃಷಿ ಮಾರುಕಟ್ಟೆ ಸಚಿವ ಎಸ್.ಕೆ.ಬೆಳ್ಳುಬ್ಬಿ ಈ ಸಂದರ್ಭದಲ್ಲಿ ಹಾಜರಿದ್ದರು.

ಆಯೋಗದ ಕೇವಿಯಟ್
ಬೆಂಗಳೂರು:
ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಣೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಕೇವಿಯಟ್ ಅರ್ಜಿ ಸಲ್ಲಿಸಿದೆ.

`ರಾಜ್ಯ ಸರ್ಕಾರ ಸಲ್ಲಿಸುವ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಪ್ರಕಟಿಸುವ ಮುನ್ನ ನಮ್ಮ ವಾದವನ್ನೂ ಆಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದೇವೆ' ಎಂದು ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ ಅವರು `ಪ್ರಜಾವಾಣಿ'ಗೆ ತಿಳಿಸಿದರು.

ತಡೆಯಾಜ್ಞೆಗೆ ಕೋರಿ ಮಧ್ಯಂತರ ಅರ್ಜಿ
ಬೆಂಗಳೂರು:
ವಾರ್ಡ್‌ವಾರು ಮೀಸಲಾತಿ ಅಂತಿಮ ಪಟ್ಟಿಯನ್ನು ಶುಕ್ರವಾರವೇ ನೀಡಬೇಕು ಎಂದು            ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಮತ್ತು ನ್ಯಾಯಮೂರ್ತಿ ಬಿ. ಮನೋಹರ್ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ, ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಶುಕ್ರವಾರ ಮಧ್ಯಂತರ ಅರ್ಜಿ ಸಲ್ಲಿಸಿದೆ.

`ವಿಭಾಗೀಯ ಪೀಠ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಈ ಹಿನ್ನೆಲೆಯಲ್ಲಿ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಸರ್ಕಾರ ಮನವಿ ಮಾಡಿದೆ' ಎಂದು ಗೊತ್ತಾಗಿದೆ.
ಹೈಕೋರ್ಟ್‌ಗೆ ಚಳಿಗಾಲದ ರಜೆ ಇರುವ ಕಾರಣ ಈ ಅರ್ಜಿ ತಕ್ಷಣವೇ ವಿಚಾರಣೆಗೆ ಬರುವುದಿಲ್ಲ. ರಜಾ ಕಾಲದ ನ್ಯಾಯಪೀಠ ಇದೇ 26 ಮತ್ತು 28ರಂದು ತುರ್ತು ಅರ್ಜಿಗಳ ವಿಚಾರಣೆ ನಡೆಸಲಿದೆ. ಸರ್ಕಾರ ಸಲ್ಲಿಸಿರುವ ಅರ್ಜಿ ಅದಕ್ಕಿಂತ ಮೊದಲು ವಿಚಾರಣೆಗೆ ಬರುವುದಿಲ್ಲ. ಡಿ. 17ರ ಒಳಗೆ ಮೀಸಲಾತಿಯ ಅಂತಿಮ ಪಟ್ಟಿ ನೀಡದ ಕಾರಣ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಈಗಾಗಲೇ ನೋಟಿಸ್ ಜಾರಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.