ADVERTISEMENT

ವಾರ್ದಾದಿಂದ ₹6,750 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2016, 19:30 IST
Last Updated 13 ಡಿಸೆಂಬರ್ 2016, 19:30 IST
ವಾರ್ದಾದಿಂದ ₹6,750 ಕೋಟಿ ನಷ್ಟ
ವಾರ್ದಾದಿಂದ ₹6,750 ಕೋಟಿ ನಷ್ಟ   

ಬೆಂಗಳೂರು: ತಮಿಳುನಾಡಿನ ಮೂರು ಜಿಲ್ಲೆಗಳನ್ನು ಹಾದು ಹೋದ ವಾರ್ದಾ ಚಂಡಮಾರುತದಿಂದಾಗಿ ರಾಜ್ಯದಲ್ಲಿ ₹6,750 ಕೋಟಿಯಷ್ಟು ನಷ್ಟವಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘ (ಅಸೋಚಾಂ) ಅಂದಾಜಿಸಿದೆ.

ಚಂಡಮಾರುತದಿಂದಾಗಿ ಮರಗಳು ಉರುಳಿವೆ, ಕಟ್ಟಡಗಳು ಹಾನಿಯಾಗಿವೆ. ಬಾಳೆ ತೋಟ, ಪಪ್ಪಾಯಿ, ಭತ್ತ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಸ್ಸೊಚಾಮ್‌ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ ತಿಳಿಸಿದ್ದಾರೆ.

ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಕಾರಣ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ತೊಂದರೆಯಾಗಿದೆ. ವಿಮಾನ ಮತ್ತು ರೈಲು ಸೇರಿ ಎಲ್ಲ ಬಗೆಯ ಸಂಚಾರ ಸ್ಥಗಿತಗೊಂಡ ಕಾರಣ ಅರ್ಥ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ ಎಂದು ಅವರು ವಿವರಿಸಿದ್ದಾರೆ.

ಚಂಡಮಾರುತದಿಂದಾಗಿ ದಕ್ಷಿಣ ಭಾರತದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಲ್ಪಾವಧಿ ಹೊಡೆತ ಬೀಳಲಿದೆ. ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಗುವ ಹೂಡಿಕೆಯ ಶೇ 10ರಷ್ಟು ತಮಿಳುನಾಡಿಗೆ ಹರಿದು ಬರುತ್ತದೆ.

ಸತ್ತವರ ಸಂಖ್ಯೆ 18ಕ್ಕೆ ಏರಿಕೆ: ಚೆನ್ನೈ ವರದಿ: ವಾರ್ದಾ ಚಂಡಮಾರುತದಿಂದಾಗಿ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ.

ಗೋಡೆ ಕುಸಿದು ಮಹಿಳೆ ಸಾವು
ಬೆಂಗಳೂರು: ವಾರ್ದಾ ಚಂಡಮಾರುತ ಪ್ರಭಾವದಿಂದಾಗಿದೆ ರಾಜ್ಯದ ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಮಂಗಳವಾರ ದಿನವಿಡೀ ತುಂತುರು ಮಳೆಯಾಗಿದ್ದು, ಕೊಯ್ಲು ಮಾಡಿದ ಭತ್ತ, ಅಡಿಕೆ ಹಾಗೂ ಕಾಫಿ ಬೆಳೆಗೆ ಹಾನಿಯಾಗಿದೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕು ಸರಗೂರು ಸಮೀಪದ ಇಟ್ನಾ ಗ್ರಾಮದಲ್ಲಿ ಮಳೆಗೆ ಗೋಡೆ ಕುಸಿದು ಚಿನ್ನನಾಯಕ ಎಂಬುವವರ ಪತ್ನಿ ತಿಮ್ಮಮ್ಮ (52) ಮೃತಪಟ್ಟಿದ್ದಾರೆ.

ಮಳೆ ಹಾಗೂ ಶೀತಗಾಳಿಗೆ ಸಿಲುಕಿ 10 ಜಾನುವಾರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ರಾಸುಗಳು ಅಸ್ವಸ್ಥಗೊಂಡಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಇರುದಾಳ್ ದೊಡ್ಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಚೆನ್ನೈನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರಿನಿಂದ ಹೊರಡಬೇಕಾಗಿದ್ದ ಕೆಲ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT