ADVERTISEMENT

‘ವಾಸಿಸುವವನಿಗೆ ಮನೆಯ ಒಡೆತನ’ ಮಸೂದೆಗೆ ರಾಷ್ಟ್ರಪತಿ ಅಂಕಿತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
‘ವಾಸಿಸುವವನಿಗೆ ಮನೆಯ ಒಡೆತನ’ ಮಸೂದೆಗೆ ರಾಷ್ಟ್ರಪತಿ ಅಂಕಿತ
‘ವಾಸಿಸುವವನಿಗೆ ಮನೆಯ ಒಡೆತನ’ ಮಸೂದೆಗೆ ರಾಷ್ಟ್ರಪತಿ ಅಂಕಿತ   

ಬೆಂಗಳೂರು: ರಾಜ್ಯದಲ್ಲಿ 58 ಸಾವಿರ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ‘ವಾಸಿಸುವವನಿಗೆ ಮನೆಯ ಒಡೆತನ’ ಕೊಡುವ ಮಹತ್ವದ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಂಕಿತ ಹಾಕಿದ್ದಾರೆ.

ಈ ಹಿಂದೆ, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ‘ಉಳುವವನೇ ನೆಲದೊಡೆಯ’ ಎಂಬ ಕಾಯ್ದೆಗೆ ಸರಿಸಮಾನವಾದ ಕ್ರಾಂತಿಕಾರಿ ಕಾಯ್ದೆಯಿದು ಎಂದು ವಿಶ್ಲೇಷಿಸಲಾಗಿದೆ.

ರಾಜ್ಯದಲ್ಲಿರುವ ಗೊಲ್ಲರ ಹಟ್ಟಿ, ಲಂಬಾಣಿ ತಾಂಡಾ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿ, ಮಜರೆ ಗ್ರಾಮ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಗೌಳಿ ದೊಡ್ಡಿ, ಕಾಲೊನಿಯಂಥ ದಾಖಲೆ ಇಲ್ಲದ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಸರ್ಕಾರದ ಸವಲತ್ತು ದೊರೆಯುವಂತೆ ಮಾಡುವ ಉದ್ದೇಶದಿಂದ ‘ಕರ್ನಾಟಕ ಭೂ ಸುಧಾರಣಾ ಕಾಯ್ದೆ –1961’ ತಿದ್ದುಪಡಿಗೆ ಕಳೆದ ಮಾರ್ಚ್‌ ತಿಂಗಳಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗಿತ್ತು.

ADVERTISEMENT

ಈ ಜನವಸತಿಗಳನ್ನು ಒಳಗೊಂಡ ಗ್ರಾಮ ವ್ಯಾಪ್ತಿಯ ಗಡಿ ಗುರುತಿಸಿ, ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ ಬಳಿಕ ಅಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡಲಾಗುವುದು. ಅಂಥ ಜನವಸತಿಗಳಲ್ಲಿ 1979ರ ಜ. 1ರಿಂದ ವಾಸಿಸುತ್ತಿರುವ ಕೃಷಿ ಕಾರ್ಮಿಕರಿಗೆ ಅವರ ಮನೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಅನುಭೋಗದ ಭೂಮಿ ಸಹಿತ ಹಕ್ಕುಪತ್ರ ನೀಡಲು ಮಸೂದೆ ಅವಕಾಶ ಕಲ್ಪಿಸುತ್ತದೆ.‌

ಈ ಮಸೂದೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಕ್ಕೊರಲಿನಿಂದ ಅಂಗೀಕಾರಗೊಂಡಿತ್ತು. ಬಳಿಕ ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ರಾಷ್ಟ್ರಪತಿ ಅಂಗೀಕಾರ ವಿಳಂಬವಾಗುತ್ತಿರುವ ಬಗ್ಗೆ ಜೂನ್‌ನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾವವಾಗಿ ಚರ್ಚೆ ನಡೆದಿತ್ತು. ಹೀಗಾಗಿ, ಆಗ ರಾಷ್ಟ್ರಪತಿಯಾಗಿದ್ದ ಪ್ರಣಬ್‌ ಮುಖರ್ಜಿ ಅವರನ್ನು ರಾಜ್ಯದ ನಿಯೋಗ ಭೇಟಿ ಮಾಡಿ ಮಸೂದೆಗೆ ಅಂಕಿತ ಹಾಕುವಂತೆ ಮನವಿ ಕೂಡಾ ಸಲ್ಲಿಸಿತ್ತು.

ಈ ಬಗ್ಗೆ ಮಾತನಾಡಿದ ಶಾಸಕ ಕೆ. ಶಿವಮೂರ್ತಿ ನಾಯಕ್‌, ‘ಮಸೂದೆಗೆ ರಾಷ್ಟ್ರಪತಿ ಮಂಗಳವಾರ (ಅ. 24) ಅಂಕಿತ ಹಾಕಿದ್ದಾರೆ. ಹೀಗಾಗಿ, ವಿಧಾನಸೌಧದ ವಜ್ರಮಹೋತ್ಸವ ಸಮಾರಂಭಕ್ಕೆ ಆಗಮಿಸಿದ ರಾಷ್ಟ್ರಪತಿ ಅವರನ್ನು ನಾನು, ಡಿ.ಎಸ್‌. ವೀರಯ್ಯ, ಶಿವರಾಜ ತಂಗಡಗಿ ಸೇರಿ ಹದಿನೈದು ಶಾಸಕರು ಇಂದು (ಬುಧವಾರ) ಬೆಳಿಗ್ಗೆ ರಾಜಭವನದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.