ADVERTISEMENT

ವಿಜಯಪುರ: ₹2 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 11:56 IST
Last Updated 13 ಏಪ್ರಿಲ್ 2017, 11:56 IST
ವಿಜಯಪುರ: ₹2 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ
ವಿಜಯಪುರ: ₹2 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ   

ವಿಜಯಪುರ: ಇಲ್ಲಿನ ಕರ್ನಾಟಕ ಗೃಹ ಮಂಡಳಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮಲ್ಲಪ್ಪ ಸುಕಾಲಿ ₹ 2 ಲಕ್ಷ ಲಂಚ ಸ್ವೀಕರಿಸುವ ಸಂದರ್ಭ ಎಸಿಬಿ ಪೊಲೀಸರ ಬಲೆಗೆ ಗುರುವಾರ ಬಿದ್ದಿದ್ದಾರೆ.

ನಗರದ ಮಹಮದ್‌ ಸಾಧಿಕ್‌ ಎಂಬುವವರಿಗೆ ನಿವೇಶನ ಕೊಡಿಸುವ ಭರವಸೆ ನೀಡಿ, ತನ್ನ ಮನೆಯಲ್ಲೇ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಎಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕರ್ನಾಟಕ ಗೃಹ ಮಂಡಳಿ ಕೇಂದ್ರ ಕಚೇರಿ ನಗರದ ಹೊರವಲಯದಲ್ಲಿರುವ ಇಟ್ಟಂಗಿಹಾಳದ ಬಳಿ ನಿರ್ಮಿಸಿರುವ ಲೇಔಟ್‌ನಲ್ಲಿ ನಿವೇಶನ ಖರೀದಿಗಾಗಿ ಪತ್ರಿಕೆಗಳ ಮೂಲಕ ಜಾಹೀರಾತು ನೀಡಿತ್ತು.

ADVERTISEMENT

ನಗರದ ಮಹಮದ್‌ ಸಾಧಿಕ್‌ ಎಂಬುವರು ನಿವೇಶನ ಪಡೆಯಲಿಕ್ಕಾಗಿ ತಾನೂ ಸೇರಿದಂತೆ ಪತ್ನಿ, ಪತ್ನಿಯ ಸಹೋದರಿ ಹೆಸರಿನಲ್ಲಿ ತಲಾ ₹ 50 ಸಾವಿರ ಪಾವತಿಸಿ ಮೂರು ಅರ್ಜಿ ಸಲ್ಲಿಸಿದ್ದರು.

ಈ ಕುರಿತ ಪ್ರಕ್ರಿಯೆ ಎಲ್ಲಿಯವರೆಗೂ ಬಂತು ಎಂಬುದನ್ನು ವಿಚಾರಿಸಲು ಸಾಧಿಕ್‌ ನಗರದ ಕೆಎಚ್‌ಬಿ ಕಚೇರಿಗೆ ತೆರಳಿದ ಸಂದರ್ಭ, ಕರ್ತವ್ಯ ನಿರ್ವಹಿಸುತ್ತಿದ್ದ ಎಸ್‌ಡಿಎ ಮಲ್ಲಪ್ಪ ಸುಕಾಲಿ ಮೂರು ನಿವೇಶನ ಮಂಜೂರು ಮಾಡಿಸಿಕೊಡುವೆ. ಒಂದೊಂದು ನಿವೇಶನಕ್ಕೆ ತಲಾ ₹ 1ಲಕ್ಷದಂತೆ ₹ 3ಲಕ್ಷ ಲಂಚ ನೀಡುವಂತೆ ತಿಳಿಸಿದ್ದರು.

ಮಹಮದ್‌ ಸಾಧಿಕ್‌ ಈ ವಿಷಯಕ್ಕೆ ಸಂಬಂಧಿಸಿದಂತೆ ಎಸಿಬಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಕಚೇರಿ ಸಿಬ್ಬಂದಿ ಜತೆ ನಡೆಸಿದ ಮಾತುಕತೆಯಂತೆ ಮಲ್ಲಪ್ಪ ಸುಕಾಲಿಗೆ ಲಂಚ ನೀಡುವ ಸಂದರ್ಭ ಎಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಸಿಬಿ ಡಿವೈಎಸ್‌ಪಿ ಮಲ್ಲೇಶ ದೊಡಮನಿ, ಇನ್ಸ್‌ಪೆಕ್ಟರ್‌ಗಳಾದ ಲೋಕೇಶ್ವರಪ್ಪ, ಮಲ್ಲಯ್ಯ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.