
ವಿಜಾಪುರ: ಕಳೆದ ವರ್ಷ ಇಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆದ ವೆಚ್ಚ ರೂ.4.20 ಕೋಟಿ. ಇದರಲ್ಲಿ 26 ಪುಸ್ತಕಗಳ ಪ್ರಕಟಣೆಗೆ ರೂ. 5 ಲಕ್ಷ, ಊಟ, ಸಭಾಭವನ ಮತ್ತು ವೇದಿಕೆಗಳಿಗೆ ರೂ.2.43 ಕೋಟಿ ವಿನಿಯೋಗವಾಗಿದೆ!
ಸಾಹಿತ್ಯ ಸಮ್ಮೇಳನ ನಡೆದು ಒಂದು ವರ್ಷವಾದರೂ ವೆಚ್ಚದ ಅಧಿಕೃತ ಮಾಹಿತಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ‘ಪ್ರಜಾವಾಣಿ’ ಒಂದು ವಾರ ಕಾಲ ನಡೆಸಿದ ಅವಿರತ ಪ್ರಯತ್ನದ ಫಲವಾಗಿ ಸಮ್ಮೇಳನದ ಹಣ ಸ್ವೀಕೃತಿ ಮತ್ತು ವೆಚ್ಚದ ಬಗೆಗಿನ ನಿಖರ ಅಂಕಿ ಅಂಶಗಳು ಲಭ್ಯವಾಗಿವೆ.
ಹಣದ ಹೊಳೆ: ಮಡಿಕೇರಿಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಎದುರಾಗಿರುವ ಆರ್ಥಿಕ ಮುಗ್ಗಟ್ಟಿನಂತೆ ವಿಜಾಪುರ ಸಮ್ಮೇಳನಕ್ಕೂ ಆರಂಭದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಸರ್ಕಾರ ರೂ. 2 ಕೋಟಿ ವಿಶೇಷ ಅನುದಾನ ನೀಡಿತ್ತು. ಸ್ಥಳೀಯವಾಗಿ ರೂ. 4.24 ಕೋಟಿ ಸಂಗ್ರಹಿಸಲಾಗಿತ್ತು.

‘ಸರ್ಕಾರದ ಅನುದಾನ ಸೇರಿದಂತೆ ಒಟ್ಟಾರೆ ರೂ.6.24 ಕೋಟಿ ಜಮಾ ಬಂದಿದೆ. ಅದರಲ್ಲಿ ರೂ.4.20 ಕೋಟಿ ಖರ್ಚಾಗಿದೆ. ಜಿಲ್ಲಾಧಿಕಾರಿಗಳ ಜಂಟಿ ಖಾತೆಯಲ್ಲಿ ಸದ್ಯ ರೂ.2.04 ಕೋಟಿ ಹಣ ಇದೆ’ ಎಂಬುದು ಉನ್ನತ ಮೂಲಗಳ ಮಾಹಿತಿ.
ಭವನ ನಿರ್ಮಾಣ: ‘ಸಮ್ಮೇಳನದ ಲೆಕ್ಕಪತ್ರವನ್ನು ಪಾರದರ್ಶಕವಾಗಿ ನಿರ್ವಹಿಸಲಾಗಿದ್ದು, ಅಂತಿಮವಾಗಿ ರೂ. 2 ಕೋಟಿ ಉಳಿಯಲಿದೆ. ಜಿಲ್ಲಾಧಿಕಾರಿ ಶಿವಯೋಗಿ ಕಳಸದ ವರ್ಗಾವಣೆಯಾಗಿ ಹೊಸಬರು ಬಂದಿರುವುದರಿಂದ ಸರ್ಕಾರಕ್ಕೆ ಲೆಕ್ಕಪತ್ರ ಸಲ್ಲಿಸುವಲ್ಲಿ ವಿಳಂಬವಾಗಿದೆ’ ಎಂಬುದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ವಿವರಣೆ.
‘ವಿಜಾಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಂದು ಎಕರೆ ನಿವೇಶನ ಪಡೆಯಲಾಗಿದ್ದು, ಅಲ್ಲಿ ರೂ.4 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಸಮ್ಮೇಳನದ ಉಳಿಕೆಯ ಹಣವನ್ನು ಭವನ ನಿರ್ಮಾಣಕ್ಕೆ ವಿನಿಯೋಗಿಸಲಾಗುವುದು’ ಎಂದು ಅವರು ತಿಳಿಸಿದರು.
‘79ನೇ ಸಮ್ಮೇಳನದ ಹಿನ್ನೆಲೆಯಲ್ಲಿ 79 ಪುಸ್ತಕ ಪ್ರಕಟಿಸಲು ನಿರ್ಧರಿಸ ಲಾಗಿತ್ತು. ನಮ್ಮ ಜಿಲ್ಲಾ ಸಮಿತಿಯಿಂದ 26 ಪುಸ್ತಕಗಳನ್ನು ಪ್ರಕಟಿಸಿದ್ದು, ಅದಕ್ಕೆ ರೂ.5 ಲಕ್ಷ ವೆಚ್ಚವಾಗಿದೆ. ಉಳಿದ ಪುಸ್ತಕಗಳನ್ನು ಕಸಾಪ ಕೇಂದ್ರ ಸಮಿತಿಯವರು ಪ್ರಕಟಿಸಿದ್ದು, ಅದರ ವೆಚ್ಚದ ವಿವರ ಪ್ರತ್ಯೇಕವಾಗಿದೆ. ಕಸಾಪ ಕೇಂದ್ರ ಸಮಿತಿಗೆ ರೂ.50 ಲಕ್ಷ ಕೊಡಲಾಗಿತ್ತು. ಅವರು ಅಂದಾಜು ರೂ.45 ಲಕ್ಷ ವೆಚ್ಚ ಮಾಡಿದ್ದಾರೆ. ಕೊಡಗು ಸಮ್ಮೇಳನದ ನಂತರ ಲೆಕ್ಕಪತ್ರ ಅಂತಿಮಗೊಳಿಸುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.