ADVERTISEMENT

ವಿಟಿಯು ಮೌಲ್ಯಮಾಪನ ಅವ್ಯವಹಾರ : ದೂರು ಕೊಟ್ಟವರ ವಿರುದ್ಧ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಬೆಳಗಾವಿ: ‘ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿರುದ್ಧ ಸುಳ್ಳು ಆರೋಪ ಮಾಡಿರುವ ವಿಧಾನ ಪರಿಷತ್ ಸದಸ್ಯ ಗಣೇಶ ಕಾರ್ಣಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದು’ ಎಂದು ಕುಲಪತಿ ಡಾ.ಎಚ್. ಮಹೇಶಪ್ಪ ಹೇಳಿದರು.

‘ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ತರಲಿಕ್ಕೆ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ. ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ಅವರು ಮಂಗಳವಾರ ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದರು.

‘ಹಣ ಕೊಟ್ಟವರ, ಇಸಿದುಕೊಂಡವರ ಹೆಸರು ಬಹಿರಂಗಪಡಿಸಲಿ. ತಪ್ಪು ಮಾಡಿದ್ದು ಸಾಬೀತಾದರೆ ನೇಣು ಹಾಕಲಿ, ಯಾರು ಬೇಡ ಎನ್ನುತ್ತಾರೆ. ಆದರೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವಿರುವ ವಿಶ್ವವಿದ್ಯಾಲಯದ ಮೇಲೆ ವಿನಾಕಾರಣ ಆರೋಪ ಮಾಡುವುದು ಬೇಡ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ’ ಎಂದು ಅವರು ಮನವಿ ಮಾಡಿಕೊಂಡರು.

‘ತನಿಖಾ ಸಮಿತಿ ರಚನೆಗೆ ಮುನ್ನ ವಿಟಿಯು ಆ್ಯಕ್ಟ್-1994ರ ನಿಯಮಾವಳಿಗಳನ್ನು ಅನುಸರಿಸಲಾಗಿಲ್ಲ. ವಿಶ್ವವಿದ್ಯಾಲಯ ವಿರುದ್ಧ ಯಾವುದೇ ಆರೋಪಗಳು ಕೇಳಿ ಬಂದಾಗ ಸರ್ಕಾರವು ವಿವರಣೆ ಕೇಳಿ ಷೋಕಾಸ್ ನೋಟಿಸ್ ನೀಡಬೇಕು.

ಕೌನ್ಸಿಲ್‌ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ವಿಷಯ ತಂದು ಉತ್ತರ ನೀಡಲಾಗುತ್ತದೆ. ಉತ್ತರ ನೀಡಿದ್ದು ಸಮರ್ಪಕವಾಗಿರದಿದ್ದರೆ ಕುಲಾಧಿಪತಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನಿಯಾಮವಳಿಯಲ್ಲಿದೆ’ ಎಂದು ಅವರು ಹೇಳಿದರು.

‘ಆದರೆ ಇದ್ಯಾವುದನ್ನು ಅನುಸರಿಸದೇ ಸಮಿತಿ ರಚಿಸಿದ್ದರ ಔಚಿತ್ಯವೇನು?’ ಪ್ರಶ್ನಿಸಿದ ಅವರು, ‘ಸಮಿತಿ ರಚನೆಯ ಮುನ್ನ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಶ್ವವಿದ್ಯಾಲಯದ ನಿಯಮಾವಳಿಗಳನ್ನು ಅರಿತುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

‘ಆರೋಪ ಮಾಡಿರುವ ದಾಖಲೆಗಳು ಇವೆ. ನಿಯಮಾವಳಿ ಪ್ರಕಾರ ಯಾವಾಗ ಬೇಕಾದರೂ ದಾಖಲೆಗಳನ್ನು ಪರಿಶೀಲಿಸಲಿ. ಜತೆಗೆ ವಿಶ್ವವಿದ್ಯಾಲಯದಲ್ಲಿ ಮರುಮೌಲ್ಯಮಾಪನ ಶುರು ಮಾಡಿದಾಗಿನಿಂದ ಇಲ್ಲಿಯವರೆಗೆ ತನಿಖೆಯಾಗಲಿ. ಆಗ ಯಾರ ಕಾಲದಲ್ಲಿ ಏನೇನಾಗಿದೆ ಎಂಬ ಸತ್ಯ ಹೊರ ಬರುತ್ತದೆ’ ಎಂದರು.

‘ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಕಾಲೇಜಿನ ಪ್ರಾಚಾರ್ಯರಾಗಿರುವ ಇಬ್ಬರು ಸಮಿತಿಯ ಸದಸ್ಯರಾಗಿದ್ದಾರೆ. ಸಮಿತಿಯಲ್ಲಿ ಸೇರಿಸಲು ರಾಜ್ಯದಲ್ಲಿ ಮಾಜಿ ಕುಲಪತಿಗಳು, ನ್ಯಾಯಾಧೀಶರು ಇಲ್ಲವೇ? ಹಿಂದೆ ಈ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಕಾಲದಲ್ಲಿ ಕುಲಸಚಿವರಾಗಿದ್ದವರೇ ಈಗ  ಸಮಿತಿಯಲ್ಲಿರುವುದನ್ನು ನೋಡಿದರೆ ಈ ಎಲ್ಲದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎಂದು ಅವರು ಆರೋಪಿಸಿದರು.

‘ಚಾಲೇಂಜಿಂಗ್ ಮರುಮೌಲ್ಯ ಮಾಪನದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಚಾಲೇಂಜಿಂಗ್ ಮರುಮೌಲ್ಯ ಮಾಪನದಲ್ಲಿ 2003ರಲ್ಲಿ ಶೇ 41.9 ರಷ್ಟು ಜನರು ಪಾಸಾಗಿದ್ದರು. ಅದರ ಪ್ರಮಾಣ ಈಗ ಶೇ 22.5ಕ್ಕೆ ಇಳಿದಿದೆ. ಆದರೂ ಆರೋಪಗಳು ಕೇಳಿ ಬರುತ್ತಿರುವುದರಿಂದ ಬೇಜಾರಾಗಿದೆ’ ಎಂದು ವಿಷಾದಿಸಿದರು.ಮೌಲ್ಯಮಾಪನ ವಿಭಾಗದ ಕುಲಸಚಿವ ಕೃಷ್ಣಮೂರ್ತಿ ಅವರು, ‘15 ಲಕ್ಷ ಉತ್ತರ ಪತ್ರಿಕೆಗಳನ್ನು ಸಾವಿರಾರು ಉಪನ್ಯಾಸಕರು ಮೌಲ್ಯಮಾಪನ ಮಾಡುತ್ತಾರೆ. ಇದರಲ್ಲಿ ಮಾನವ ಸಹಜ ತಪ್ಪಿನಿಂದಾಗಿ ಕೆಲವರು ಕಡಿಮೆ ಅಂಕ ಪಡೆಯುತ್ತಾರೆ.

ಚಾಲೆಂಜಿಂಗ್ ಮರುಮೌಲ್ಯಮಾಪನದಲ್ಲಿ ಅಂತಹವರು ಪಾಸಾಗುತ್ತಾರೆ. ಈಗ ಶೇ 22 ರಷ್ಟಿದ್ದಾಗ ಅನುಮಾನ ಪಡಲಾಗುತ್ತಿದೆ. 2003 ರಲ್ಲಿ ಶೇ 41 ರಷ್ಟಿತ್ತು. ಅದನ್ನು ತನಿಖೆ ಮಾಡಬೇಕು’ ಎಂದರು.

‘ಹಿಂದೆ ಅನೇಕ ಬಾರಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿದ್ದವು. ಪ್ರಿಂಟಿಂಗ್ ಯುನಿಟ್‌ನಿಂದಲೇ ಬಹಿರಂಗವಾಗುತ್ತಿತ್ತು. ಅದರ ಬಗೆಗೆ ತನಿಖೆ ಮಾಡಲಾಗಿದೆಯೇ? ಏನು ಕ್ರಮಕೈಗೊಳ್ಳಲಾಗಿದೆ. ಹಿಂದೆ ನಿಂತು ಸಮರ ಮಾಡುವುದು ಬೇಡ. ಧೈರ್ಯದಿಂದ ನೇರವಾಗಿ ಮುಂದೆ ಬಂದು ಹೋರಾಟ ಮಾಡಲಿ. ತಪ್ಪಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧರಿದ್ದೇವೆ’ ಎಂದು ಸವಾಲು ಹಾಕಿದರು.ಆಡಳಿತ ಕುಲಸಚಿವ ಎಸ್.ಎ. ಕೋರಿ ಅವರು, ‘ಮರುಮೌಲ್ಯಮಾಪನದಲ್ಲಿ ಯಾವುದೇ ಲೋಪ ಆಗಿಲ್ಲ. ಪ್ರತಿ ಹಂತದಲ್ಲೂ ನಿಯಮಾವಳಿಗಳನ್ನು ಪಾಲನೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.