ADVERTISEMENT

ವಿದಾಯ ಬೇಡ: ನಿರ್ಮಾಪಕರ ಮನವಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಬೆಂಗಳೂರು:  ಇನ್ನು ಮೂರು ದಿನಗಳೊಳಗಾಗಿ ನಟಿ ರಮ್ಯಾ ಅವರಿಗೆ ಕೊಡಬೇಕಿರುವ ಬಾಕಿ ಹಣವನ್ನು ನೀಡಿ, ಅವರನ್ನು ‘ದಂಡಂ ದಶಗುಣಂ’ ಚಿತ್ರದ ಪ್ರಚಾರದಲ್ಲಿ ಭಾಗಿಯಾಗುವಂತೆ ಕೇಳಿಕೊಳ್ಳಲಾಗುವುದು. ಪ್ರಚಾರದಲ್ಲಿ ಭಾಗಿಯಾಗುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ನಿರ್ಮಾಪಕ ಮುನಿರತ್ನ ಶನಿವಾರ ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯ ನಂತರ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ‘ದಂಡಂ ದಶಗುಣಂ’ ಚಿತ್ರದ ನಿರ್ಮಾಪಕ ಗಣೇಶ್ ಅವರಿಗೆ ರಮ್ಯಾ 10 ಲಕ್ಷ ರೂಪಾಯಿ ಹಣ ನೀಡಿದ್ದರು. ಅದರಲ್ಲಿ 3.8 ಲಕ್ಷ ರೂಪಾಯಿಯನ್ನು ಗಣೇಶ್ ಬಾಕಿ ಕೊಡಬೇಕು. ನಟಿ. ನಿರ್ಮಾಪಕರ ನಡುವೆ ಈ ಹಣದ ವ್ಯವಹಾರ ನಡೆದಾಗ ಮುನಿರತ್ನ ಕೂಡ ಇದ್ದರು. ಹಾಗಾಗಿ ಅವರು ಸಂಘವು ತೆಗೆದುಕೊಂಡ ತೀರ್ಮಾನವನ್ನು ತಿಳಿಸಿದರು.

ಇನ್ನು ಮುಂದೆ ಇಂಥ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಚಿತ್ರರಂಗದ ಎಲ್ಲರೂ ಸಹಕರಿಸಬೇಕು ಎಂದು ನಿರ್ಮಾಪಕರ ಸಂಘದ ಕೆ.ಸಿ.ಎನ್.ಚಂದ್ರಶೇಖರ್ ಮನವಿ ಮಾಡಿದರು. ಎಲ್ಲಾ ಹಣಕಾಸಿನ ವ್ಯವಹಾರಕ್ಕೂ ಕರಾರು ಮಾಡಿಕೊಂಡು, ಅದರ ಪ್ರತಿಗಳನ್ನು ಸಂಬಂಧಪಟ್ಟ ಸಂಘಕ್ಕೆ ಕಳುಹಿಸಿದರೆ, ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದು ಅವರ ಕಿವಿಮಾತು.

ನಟಿ ರಮ್ಯಾ ಇನ್ನೂ ಚಿಕ್ಕ ವಯಸ್ಸಿನ ನಟಿ. ಅವರು ಇಷ್ಟು ಬೇಗ ವಿದಾಯ ಹೇಳಬಾರದು. ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬೇಕು ಎಂದು ಚಂದ್ರಶೇಖರ್ ಅಭಿಪ್ರಾಯಪಟ್ಟರು. ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವುದು ಎಲ್ಲರ ಕರ್ತವ್ಯ. ಅದು ಹಿಂದಿನಿಂದಲೂ ಇರುವ ರೂಢಿ. ಪ್ರಚಾರದ ವಿಷಯದ ಬಗ್ಗೆ ಕರಾರು ಮಾಡಿಕೊಳ್ಳುವ ಪದ್ಧತಿಯೇ ಇಲ್ಲ.ಚಿತ್ರವನ್ನು ಗೆಲ್ಲಿಸುವ ದೃಷ್ಟಿಯಿಂದ ಅದು ಅಲಿಖಿತ ಪದ್ಧತಿಯಂತೆ ನಡೆದುಕೊಂಡು ಬಂದಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ನಿರ್ಮಾಪಕರಾದ ಸಾ.ರಾ.ಗೋವಿಂದು, ಕೆ.ಮಂಜು, ಯೋಗೀಶ್ ಹುಣಸೂರು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ನಿರ್ಮಾಪಕ ಗಣೇಶ್ ಅಲ್ಲಿ ಇದ್ದರೂ ಏನೊಂದನ್ನೂ ಮಾತನಾಡಲಿಲ್ಲ. ರಮ್ಯಾ ಹಾಗೂ ಗಣೇಶ್ ನಡುವಿನ ವಿವಾದವನ್ನು ಬಗೆಹರಿಸಲು ನಟ ಅಂಬರೀಷ್ ಇಬ್ಬರನ್ನೂ ಶನಿವಾರ ತಮ್ಮ ಮನೆಗೆ ಆಹ್ವಾನಿಸಿದ್ದರು ಎನ್ನಲಾಗಿದ್ದು, ಗಣೇಶ್ ಅಲ್ಲಿಗೆ ಹೋಗಲಿಲ್ಲ ಎಂದು ತಿಳಿದುಬಂದಿದೆ. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಗೆ ಅಂಬರೀಷ್ ಬಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.