ADVERTISEMENT

ವಿದ್ಯಾರ್ಥಿನಿ ಅಪಹರಣ ಯತ್ನ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಹೊನ್ನಾಳಿ: ವಿದ್ಯಾರ್ಥಿನಿಯನ್ನು ಕ್ರೂಸರ್ ವಾಹನದಲ್ಲಿ ಅಪಹರಿಸುತ್ತಿದ್ದ ನಾಲ್ವರನ್ನು ಹೊನ್ನಾಳಿ ಪೊಲೀಸರು ಶನಿವಾರ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿದ್ಯಾರ್ಥಿನಿ ಏನೂ ತೊಂದರೆಯಾಗದೇ ಸುರಕ್ಷಿತವಾಗಿ ಮನೆಗೆ ಹಿಂತಿರುಗಿದ್ದಾಳೆ.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಈ ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ 25-30 ವಿದ್ಯಾರ್ಥಿಗಳು-ಉಪನ್ಯಾಸಕರ ಎದುರಿನಲ್ಲೇ ಆರು ಮಂದಿ ಯುವಕರು ಕ್ರೂಸರ್‌ನಲ್ಲಿ ಬಲವಂತವಾಗಿ ಹತ್ತಿಸಿಕೊಂಡರು. ಹುಡುಗಿಯನ್ನು ಎಳೆದಾಡಿದ ರಭಸಕ್ಕೆ ವೇಲ್ ಮತ್ತು ಪುಸ್ತಕಗಳು ಸ್ಥಳದಲ್ಲಿ ಬಿದ್ದಿದ್ದವು.

ಘಟನೆಯನ್ನು ಕಂಡ ಕಾಲೇಜು ಉಪನ್ಯಾಸಕರೊಬ್ಬರು ಹೊನ್ನಾಳಿ ಪೊಲೀಸ್ ಠಾಣೆಗೆ ಸುದ್ದಿ ತಲುಪಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಸಿಪಿಐ ಎಚ್.ಎನ್.ಹೊನ್ನಪ್ಪ ಮತ್ತು ಪಿಎಸ್‌ಐ ಬಿ.ಜಿ. ಕುಮಾರಸ್ವಾಮಿ ಸಿಬ್ಬಂದಿ ಜತೆ ಸಂಜೆ 4.30ರ ವೇಳೆಗೆ ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದ ಬಳಿ ಚಾಲಕ ಧ್ರುವ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು.

ವಾಹನದಲ್ಲಿ ಹತ್ತಿಸಿಕೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ತಾಲ್ಲೂಕಿನ ಅರಬಗಟ್ಟೆ ಗ್ರಾಮದ ಹೊರವಲಯದಲ್ಲಿ ಇಳಿಸಿ ತಾನು ಮತ್ತು ಇತರ ಮೂವರು ಹೊನ್ನಾಳಿಗೆ ಬಂದಿರುವುದಾಗಿಯೂ, ಆ ಮೂವರು ಶಿವಮೊಗ್ಗದ ಬಸ್‌ನಲ್ಲಿ ತೆರಳಿದರು ಎಂದು ಚಾಲಕ ಧ್ರುವ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

ಆತನ ಮಾಹಿತಿ ಮೇರೆಗೆ ಪೊಲೀಸರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚೀಲೂರು ಬಳಿ ತೆರಳುತ್ತಿದ್ದ ಅಶೋಕ್ ಅಲಿಯಾಸ್ ಕಪ್ಪೆ, ಮಂಜು, ಚಂದ್ರು ಎಂಬ ಮೂವರನ್ನು ಬಂಧಿಸಿದರು. ಚನ್ನ ಹಾಗೂ ಬಸವರಾಜ ಎಂಬ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.ವಿದ್ಯಾರ್ಥಿನಿಯ ಅಪಹರಣಕ್ಕೆ ಬಳಸಿದ್ದ ಕ್ರೂಸರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT