ADVERTISEMENT

ವಿದ್ಯುತ್‌ ದರ ಏರಿಕೆಗೆ ಎಸ್ಕಾಂಗಳ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2014, 19:34 IST
Last Updated 13 ಡಿಸೆಂಬರ್ 2014, 19:34 IST

ಬೆಂಗಳೂರು: ಪ್ರತಿ ಯೂನಿಟ್‌ ವಿದ್ಯುತ್ ದರವನ್ನು 80 ಪೈಸೆಯಷ್ಟು ಹೆಚ್ಚಿಸು­ವಂತೆ ಕೋರಿ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಅರ್ಜಿ ಸಲ್ಲಿಸಿವೆ.

ನೀರಾವರಿ ಪಂಪ್‌ಸೆಟ್‌ಗಳಿಗೆ ರಿಯಾಯ್ತಿ ದರದಲ್ಲಿ ಪೂರೈಸುವ ವಿದ್ಯುತ್‌ಗೂ ಈ ದರ ಹೆಚ್ಚಳ ಅನ್ವಯಿಸುವಂತೆ ಕೋರಿವೆ.
2014–15ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣೆ ಪರಿಶೀಲನಾ ವರದಿ ಮತ್ತು 2016–17ನೇ ಸಾಲಿನ ವಾರ್ಷಿಕ ಆದಾಯದ ಬೇಡಿಕೆ ಹಾಗೂ ಚಿಲ್ಲರೆಯಾಗಿ ಪೂರೈಸುವ ವಿದ್ಯುತ್ತಿನ ದರಪಟ್ಟಿಗೆ ಒಪ್ಪಿಗೆ ಕೊಡುವಂತೆಯೂ ಅವು ವಿನಂತಿಸಿವೆ.

ಬೆಂಗಳೂರು (ಬೆಸ್ಕಾಂ), ಮಂಗ­ಳೂರು (ಮೆಸ್ಕಾಂ), ಚಾಮುಂಡೇಶ್ವರಿ (ಸೆಸ್ಕ್), ಹುಬ್ಬಳ್ಳಿ (ಹೆಸ್ಕಾಂ) ಮತ್ತು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿಗಳು (ಜೆಸ್ಕಾಂ) ಇದೇ 8ರಂದು ಆಯೋಗಕ್ಕೆ ಪ್ರತ್ಯೇಕವಾದ ಅರ್ಜಿಗಳನ್ನು ಸಲ್ಲಿಸಿವೆ. ಎಲ್ಲ ಕಂಪೆನಿಗಳೂ ಒಂದೇ ಪ್ರಮಾಣದ ದರ ಹೆಚ್ಚಳಕ್ಕೆ ಮನವಿ ಮಾಡಿವೆ.

ಈ ಕಂಪೆನಿಗಳು 63,437 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸುತ್ತಿದ್ದು, 52,056 ದಶಲಕ್ಷ ಯೂನಿಟ್ ಮಾರಾಟ ಮಾಡುತ್ತಿವೆ. 2016–17ನೇ ಆರ್ಥಿಕ ವರ್ಷಕ್ಕೆ ಐದು ಕಂಪೆನಿಗಳಿಗೆ ಒಟ್ಟು ₨ 31,379 ಕೋಟಿ ಆದಾಯದ ಅಗತ್ಯ ಇದೆ ಎಂದು ಅರ್ಜಿಗಳಲ್ಲಿ ಉಲ್ಲೇಖಿಸಲಾಗಿದೆ.

2014–15ರಲ್ಲಿ ಆದಾಯ ಸಂಗ್ರಹದಲ್ಲಿ ₨ 1,642.9 ಮತ್ತು 2016–17 ರಲ್ಲಿ ₨ 2,831.4 ಕೋಟಿ ಕೊರತೆ ಬೀಳಬಹುದು ಎಂಬ ಅಂದಾಜು ಅರ್ಜಿಯಲ್ಲಿದೆ. ಒಟ್ಟು ₨ 4,165.5 ಕೋಟಿ ಆದಾಯದ ಕೊರತೆ ಆಗಬಹುದು. ಈ ಎಲ್ಲ ಅಂಶಗಳನ್ನು ಆಧರಿಸಿ ದರ ಹೆಚ್ಚಳ ಬೇಡಿಕೆಯನ್ನು ಪುರಸ್ಕರಿಸುವಂತೆ ಕಂಪೆನಿಗಳು ಕೋರಿವೆ.

ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ಕೂಡ 2014–15ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ ವರದಿಗೆ ಒಪ್ಪಿಗೆ

ಕೋರಿ ಅರ್ಜಿ ಸಲ್ಲಿಸಿದೆ. ಆದಾಯದಲ್ಲಿ ₨ 255.99 ಕೋಟಿ ಕೊರತೆ ಆಗಬಹುದು ಎಂಬ ಅಂದಾಜು ಮಂಡಿಸಿರುವ ನಿಗಮ, ಇದನ್ನು 2016–17ನೇ ಸಾಲಿನಲ್ಲಿ ಸಂಗ್ರಹಿಸಲು ಅನುಮತಿ ಕೋರಿದೆ.

‘ಈ ಅರ್ಜಿಗಳಿಗೆ ಸಂಬಂಧಿಸಿದಂತೆ ವಿದ್ಯುತ್ ಸರಬರಾಜು ಕಂಪೆನಿಗಳು ಮತ್ತು ನಿಗಮದಿಂದ ಹೆಚ್ಚಿನ ಮಾಹಿತಿ ಪಡೆಯಲಾಗುವುದು. ಬಳಿಕ ಬಹಿರಂಗ ವಿಚಾರಣೆ ನಡೆಸಿ, ಗ್ರಾಹಕರು ಮತ್ತು ಕಂಪೆನಿಗಳ ಅಭಿಪ್ರಾಯ ಆಲಿಸಲಾಗುವುದು. ನಿಯಮಗಳ ಪ್ರಕಾರ 2015ರ ಮಾರ್ಚ್‌ 31ರೊಳಗೆ ಅಥವಾ ಅದೇ ದಿನ ದರ ಪರಿಷ್ಕರಣೆಗೆ ಸಂಬಂಧಿಸಿದ ಆದೇಶ ಹೊರಡಿಸಲಾಗುವುದು’ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.