ADVERTISEMENT

ವಿಧಾನಸಭೆ ವಿಸರ್ಜಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST
ವಿಧಾನಸಭೆ ವಿಸರ್ಜಿಸಲು ಆಗ್ರಹ
ವಿಧಾನಸಭೆ ವಿಸರ್ಜಿಸಲು ಆಗ್ರಹ   

ಬೆಂಗಳೂರು: ಬಿಜೆಪಿಯ ಆಂತರಿಕ ಕಚ್ಚಾಟದಿಂದಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನಿರ್ಮಾಣವಾಗಿದೆ. ರಾಜ್ಯಪಾಲರು ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದರು.

ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ರೆಹಮಾನ್ ಖಾನ್ ಅವರು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಬಿಜೆಪಿಯ ಎರಡು ಬಣಗಳ ನಡುವಿನ ಕಚ್ಚಾಟದಿಂದಾಗಿ ರಾಜ್ಯದಲ್ಲಿ ಸ್ಥಿರ ಸರ್ಕಾರವೇ ಇಲ್ಲದಂತಾಗಿದೆ ಎಂದರು.

ರಾಜ್ಯದಲ್ಲಿ ಬರಗಾಲವಿದ್ದು, ಜನ ಸಾಯುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಬಿಟ್ಟು ಶಾಸಕರು ರೆಸಾರ್ಟ್‌ನಲ್ಲಿ ಬಿಡಾರ ಹೂಡಿದ್ದಾರೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿರುವುದು ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಟೀಕಿಸಿದರು.

ಬಜೆಟ್ ಮಂಡನೆಗೆ ಒಂದು ದಿನ ಮಾತ್ರ ಬಾಕಿ ಇದೆ. ಆದರೆ ಯಾರು ಬಜೆಟ್ ಮಂಡನೆ ಮಾಡುತ್ತಾರೆ ಎಂಬುದೇ ಸ್ಪಷ್ಟವಾಗಿಲ್ಲ. ಸರ್ಕಾರ ಉಳಿಯುತ್ತದೊ, ಹೋಗುತ್ತದೊ ಎಂಬುದೇ ಗೊತ್ತಿಲ್ಲ. ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಬಿಜೆಪಿಯಿಂದ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಆ ಪಕ್ಷದ ಆಂತರಿಕ ವಿಚಾರ. ಅದರಲ್ಲಿ ನಾವು ತಲೆ ಹಾಕುವುದಿಲ್ಲ. ನಮಗೆ ಸ್ಥಿರ ಸರ್ಕಾರಬೇಕು ಅಷ್ಟೇ. ಬೇಕಾದರೆ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಿ~ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.