ಧಾರವಾಡ: `ವಿಮರ್ಶಾ ಲೋಕವು ಹೊರಜಗತ್ತಿನ ಎಲ್ಲ ಪಾಪಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ವಿಮರ್ಶಾ ಲೋಕದಲ್ಲೂ ಮಠಗಳಿವೆ, ಮಾಫಿಯಾಗಳಿವೆ. ಸಾಹಿತ್ಯ ಲೋಕದ ಜಗದ್ಗುರುಗಳನ್ನು ಅನುಸರಿಸಿದರೆ, ನಾನು ಬರೆಯುವ ವಿಮರ್ಶಾ ಬರಹಗಳು ಬೇರೆಯವರಿಗೆ ಜಟಿಲವಾಗಿ ಕಾಣುವುದಿಲ್ಲ' ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.
`ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಭಾನುವಾರ ಆಯೋಜಿಸಿದ್ದ `ಕನ್ನಡ ವಿಮರ್ಶೆಯ ಸಂಕೀರ್ಣತೆ - ಜಟಿಲತೆ' ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು. `ಸಾಹಿತ್ಯ, ಭಾಷೆ ಮತ್ತು ವಿಮರ್ಶೆಗಳು ಸಾಂಸ್ಥಿಕ ಸ್ವರೂಪ ಪಡೆದುಕೊಂಡಿವೆ. ಹಾಗಾಗಿಯೇ ಇಲ್ಲಿ ಅಧಿಕಾರ ರಾಜಕಾರಣವೂ ಇದೆ. ಸಂಸ್ಕೃತಿ, ಸಾಹಿತ್ಯ ಎಂಬ ಸಂಸ್ಥೆಗಳು ರಾಜಕಾರಣವೆಂಬ ಸಂಸ್ಥೆ ವಿರೋಧಿಸುತ್ತಿಲ್ಲ. ಅವು ರಾಜಕಾರಣವನ್ನೂ ನಕಲು ಮಾಡುತ್ತಿವೆ. ನಮ್ಮ ವಿಶ್ವವಿದ್ಯಾಲಯಗಳೂ ಇದೇ ಕೆಲಸದಲ್ಲಿ ತೊಡಗಿವೆ. ಇಂದಿನ ವಿಮರ್ಶೆಯು ದಲಿತ ಮತ್ತು ಮುಸ್ಲಿಂ ಬರಹಗಾರರಿಗೆ ತಮ್ಮ ಸಾಹಿತ್ಯದ ವಿಮರ್ಶೆ ಎಂದು ಅನಿಸುತ್ತಿಲ್ಲ' ಎಂದು ಹೇಳಿದರು.
`ನಾವು ಬದುಕುತ್ತಿರುವುದು ಅವಿಮರ್ಶಕ ಸಮಾಜದಲ್ಲಿ. ಬಂಡವಾಳಶಾಹಿ ವ್ಯವಸ್ಥೆ, ಭ್ರಷ್ಟಾಚಾರ, ಬಲಪಂಥೀಯ ಗುಂಪುಗಳು ಸಮಾಜದ ಮೇಲೆ ಆಕ್ರಮಣ ನಡೆಸುತ್ತಿವೆ. ಆದರೆ ಇವುಗಳ ಬಗ್ಗೆ ನಾವು ಮಂಪರಿನಲ್ಲಿದ್ದೇವೆ. ಇವುಗಳನ್ನು ವಿಮರ್ಶಿಸುವತ್ತ ನಾವು ಮನಸ್ಸು ಮಾಡಿಲ್ಲ. ಒಂದು ಕೃತಿಯನ್ನು ವಿವರಿಸಿ ಹೇಳುವುದು ಮಾತ್ರ ವಿಮರ್ಶೆ ಅಲ್ಲ. ವಿಮರ್ಶಕನಿಗೆ ಅದಕ್ಕಿಂತ ಹಿರಿದಾದ ಜವಾಬ್ದಾರಿ ಇದೆ. ವಿಮರ್ಶೆಯೆಂಬುದು ಎರಡನೆಯ ದರ್ಜೆಯ ಕೆಲಸವಲ್ಲ' ಎಂದರು.
`ವಿಮರ್ಶೆಯೊಂದೇ ಜಟಿಲವಲ್ಲ': ಜಟಿಲತೆ ಎಂಬುದು ಸಾಪೇಕ್ಷ ಪದ. ವಿಮರ್ಶೆ ಮಾತ್ರವೇ ಜಟಿಲ ಎಂಬ ಮಾತು ಸರಿಯಲ್ಲ. ವಿಮರ್ಶೆ ಕೂಡ ಸೃಜನಶೀಲ ಕೆಲಸ. ಲೇಖಕರು ತಮ್ಮ ಅನುಭವ ಜಗತ್ತಿನ ಜೊತೆಗೆ ಮಾತ್ರ ಮುಖಾಮುಖಿಯಾದರೆ, ವಿಮರ್ಶಕರು ತಮ್ಮ ಅನುಭವ ಜಗತ್ತು ಮತ್ತು ಕೃತಿಯ ಜಗತ್ತಿನ ಜೊತೆ ಮುಖಾಮುಖಿಯಾಗುತ್ತಾರೆ ಎಂದು ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ವಿಮರ್ಶಕರು ಪರಾವಲಂಬಿಗಳಲ್ಲ. ರಾಜಕೀಯ ಮತ್ತು ಧರ್ಮ ಇಂದಿನ ವ್ಯವಸ್ಥೆಯ ಅಧಿಕಾರ ಕೇಂದ್ರಗಳು. ಈ ಎರಡು ಸಂಸ್ಥೆಗಳಿಗೆ ವಿಮರ್ಶೆ ಬೇಕಾಗಿಲ್ಲ. ಅವು ವಿಮರ್ಶೆಯನ್ನು ಹೊಸಕಿ ಹಾಕುತ್ತಿವೆ. ಸಾಹಿತ್ಯ ಕ್ಷೇತ್ರವನ್ನೂ ಈ ರೋಗ ಆವರಿಸಿಕೊಳ್ಳುತ್ತಿದೆ. ಹಾಗಾಗಿ ಅಲ್ಲಿಯೂ ವಿಮರ್ಶೆಯ ಬಗ್ಗೆ ಅಸಹನೆ ಹುಟ್ಟಿಕೊಂಡಿದೆ. ವಿಮರ್ಶೆಯನ್ನು ಹೊಸಕುವ ಪ್ರವೃತ್ತಿ ಸಮಾಜಕ್ಕೆ ಅಪಾಯಕಾರಿ ಎಂದು ಅವರು ಎಚ್ಚರಿಸಿದರು.
`ಜನಪ್ರಿಯ ಸಂಸ್ಕೃತಿಯನ್ನು ವಿಮರ್ಶಾ ಲೋಕ ವಿರೋಧಿಸುತ್ತದೆ. ಏಕೆಂದರೆ ಜನಪ್ರಿಯ ಸಂಸ್ಕೃತಿಯು ನೈಜ ಸಮಸ್ಯೆಯನ್ನು ಎದುರಿಸಲಾರದೆ ಪಲಾಯನ ಮಾಡುತ್ತದೆ. ಧರ್ಮ ಮತ್ತು ಸಂಸ್ಕೃತಿಯನ್ನು ಚರ್ಚಿಸುವ ಮಹತ್ವದ ಕೃತಿಗಳು ಇಂದಿಗೂ ಹುಟ್ಟುತ್ತಿಲ್ಲವೇಕೆ' ಎಂದು ಅವರು ಪ್ರಶ್ನಿಸಿದರು.
ದಲಿತ ಸಮುದಾಯ ಅಕ್ಷರ ಕಲಿತು, ತನ್ನ ಲೋಕದ ಕುರಿತು ಸಾಹಿತ್ಯ ರಚಿಸಿತು. ಹೊಸದೊಂದು ಅನುಭವ ಜಗತ್ತು ನಮ್ಮೆದುರು ತೆರೆದುಕೊಂಡಾಗ, ಅದನ್ನು ವಿಮರ್ಶಿಸಲು ಬೇರೆಯೇ ಮಾನದಂಡಗಳು ಬೇಕಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
`ಎಲ್ಲಕ್ಕೂ ಅನ್ವಯ': `ಸಂಕೀರ್ಣತೆ ಮತ್ತು ಜಟಿಲತೆ ಎಂಬ ಗುಣಗಳನ್ನು ಸಾಹಿತ್ಯದ ಎಲ್ಲ ಪ್ರಕಾರಗಳಿಗೆ ಅನ್ವಯಿಸಬಹುದು. ಆದರೆ ಎಲ್ಲ ಪ್ರಕಾರಗಳಿಗಿಂತ ಹೆಚ್ಚು ಸೂಕ್ಷ್ಮವಾಗಿ ವರ್ತಿಸಿರುವುದು ವಿಮರ್ಶಾ ಪ್ರಕಾರ' ಎಂದು ವಿಮರ್ಶಕ ವಿಕ್ರಮ ವಿಸಾಜಿ ಅಭಿಪ್ರಾಯ ಮಂಡಿಸಿದರು. ವಿಮರ್ಶಕರು ಸಾಹಿತ್ಯ ಕೃತಿಯ ಸೃಜನಾತ್ಮಕ ಓದುಗರು. ವಿಮರ್ಶೆಯೆಂದರೆ ಅದು ಕೃತಿಯೊಂದರ ಪರ ಅಥವಾ ವಿರೋಧ ಎಂಬುದು ಸರಿಯಲ್ಲ. ವಿಮರ್ಶೆ ಸಾಹಿತ್ಯ ಚಿಂತನೆಯ ಒಂದು ಮಾರ್ಗ ಎಂದು ಪ್ರತಿಪಾದಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಮರ್ಶಕ ಒ.ಎಲ್. ನಾಗಭೂಷಣಸ್ವಾಮಿ, `ವಿಮರ್ಶೆಯೆಂಬುದು ಉಸಿರಾಟದಷ್ಟೇ ಅನಿವಾರ್ಯ ಕ್ರಿಯೆ. ಪ್ರತಿಯೊಂದು ವಿಚಾರವೂ ಸುಲಭವಾಗಿ ಅರ್ಥವಾಗಬೇಕು ಎಂಬ ತಪ್ಪು ಕಲ್ಪನೆಯೇ ಕಾರಣ. ವಿಮರ್ಶೆ ಎಂಬುದು ಜಟಿಲ ಅಥವಾ ಸಂಕೀರ್ಣ ಎಂಬ ಹೇಳಿಕೆಗಳು ಬರುತ್ತವೆ' ಎಂದರು. ವಿಮರ್ಶಕ ಎಂ.ಜಿ. ಹೆಗಡೆ ಗೋಷ್ಠಿಯ ನಿರ್ದೇಶಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.